ಉಡುಪಿ: ಪೌರ ಕಾರ್ಮಿಕನಿಗೆ ನಡು ರಸ್ತೆಯಲ್ಲೇ ಹಲ್ಲೆ: ಇಬ್ಬರು ಆರೋಪಿಗಳು ಅಂದರ್
ಉಡುಪಿ, ಮಾರ್ಚ್ 13: ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ಪೌರ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿದ್ದು, ಉಡುಪಿ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಉಡುಪಿ ನಗರದ ಪ್ರಮುಖ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದಕ್ಕೆ ಪೌರಕಾರ್ಮಿಕರು ಕಸ ಸಂಗ್ರಹಕ್ಕಾಗಿ ತೆರಳಿದ್ದರು. ಈ ವೇಳೆ ಪೌರಕಾರ್ಮಿಕ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯ ಕೆಲಸಗಾರರ ನಡುವೆ ಒಣ ಕಸ ಮತ್ತು ಹಸಿ ಕಸ ಮಿಶ್ರಣ ವಿಚಾರವಾಗಿ ವಾಗ್ವಾದ ನಡೆದಿದೆ.

ಈ ಸಮಯದಲ್ಲಿ ಅಂಗಡಿಯ ಇಬ್ಬರು ಕೆಲಸಗಾರರು ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಪೌರಕಾರ್ಮಿಕ ಬಾಗಲಕೋಟೆ ಮೂಲದ, ಉಡುಪಿಯ ನಿಟ್ಟೂರು ನಿವಾಸಿ ಸಂಜು ಮಾದರ್ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಡೀ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಪೊಲೀಸರು ಹಲ್ಲೆ ನಡೆಸಿದ ಇಬ್ಬರು ಆರೋಪಿಗಳಾದ ಇಸ್ಮಾಯಿಲ್ ಮತ್ತು ಸುಹೇಲ್ ಅವರನ್ನು ಬಂಧಿಸಿದ್ದಾರೆ.












Click it and Unblock the Notifications