ಕನಕ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಅಮಿತ್ ಶಾ
ಉಡುಪಿ, ಫೆಬ್ರವರಿ 21: ಉಡುಪಿಯ ಶ್ರೀ ಕೃಷ್ಣಮಠಕ್ಕೆ ಇಂದು ಮುಂಜಾನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಮುಂಜಾನೆ ಶ್ರೀ ಕೃಷ್ಣ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಅವರೊಂದಿಗೆ ಆಗಮಿಸಿದ ಅಮಿತ್ ಶಾ ಶ್ರೀ ಕೃಷ್ಣನಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದರು.
ಪಂಚೆ, ಶಲ್ಯ ತೊಟ್ಟ ಅಮಿತ್ ಶಾ ಕೃಷ್ಣ ಕನಕ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು. ಮಹಾಪೂಜೆ ಸಂದರ್ಭದಲ್ಲೇ ಕೃಷ್ಣ ಮಠಕ್ಕೆ ಭೇಟಿ ನೀಡಿದ ಶಾ ಮಾಹಾಪೂಜೆಯಲ್ಲಿಯೂ ಪಾಲ್ಗೊಂಡರು.

ಕೃಷ್ಣನ ದರ್ಶನದಿಂದ ಸಂತೃಪ್ತಿ
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮಿತ್ ಶಾ, ಕೃಷ್ಣನ ದರ್ಶನ ಮಾಡಿ ಧನ್ಯನಾಗಿದ್ದೇನೆ. ಬೆಳಗ್ಗೆಯೇ ಶ್ರೀಕೃಷ್ಣನ ದರ್ಶನ ಸಿಕ್ಕಿದ್ದು ಸಂತೃಪ್ತಿಯಾಗಿದೆ ಎಂದು ಹೇಳಿದರು.

ರಾಮಧಾಮ ಉದ್ಘಾಟಿಸಿದ ಅಮಿತ್ ಶಾ
ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿ ನೀಡಿದೆ ಎಂದು ಹೇಳಿದ ಅವರು ನಿನ್ನೆಯ ಸಂತರ ಭೇಟಿಯೂ ನನ್ನ ಪಾಲಿಗೆ ಒಲಿದು ಬಂದ ಪುಣ್ಯ ಎಂದು ಬಣ್ಣಿಸಿದರು. ನಂತರ ಪಲಿಮಾರು ಮಠದ ಛತ್ರ ರಾಮಧಾಮವನ್ನು ಅಮಿತ್ ಶಾ ಉದ್ಘಾಟಿಸಿದರು.

ಹರಸಿದ ಪಲಿಮಾರು ಶ್ರೀ
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಸ್ವಾಮೀಜಿ ಕೃಷ್ಣನ ಸನ್ನಿಧಿಗೆ ಅಮಿತ್ ಶಾ ಮಾತ್ರ ಬಂದಿಲ್ಲ. ಕಮಲವನ್ನೂ ಹೊತ್ತು ತಂದಿದ್ದಾರೆ. ಮುಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಮಲ ವಿಕಸನಗೊಳ್ಳಲಿ ಎಂದು ಆಶೀರ್ವದಿಸಿದರು.

ಮತ್ತೆ ಮತ್ತೆ ಬನ್ನಿ
ಯಡಿಯೂರಪ್ಪ, ಮೋದಿ ನೇತೃತ್ವದ ಸರಕಾರ ಕಾಣುವಂತಾಗಲಿ ಎಂದು ಹೇಳಿದ ಅವರು, ಮತ್ತೆ ಮತ್ತೆ ಕುಟುಂಬ ಸಮೇತರಾಗಿ ಮಠಕ್ಕೆ ಬರುತ್ತಿರಿ ಎಂದು ಅಮಿತ್ ಶಾಗೆ ಪಲಿಮಾರು ಶ್ರೀಗಳ ಆಹ್ವಾನ ನೀಡಿದರು.












Click it and Unblock the Notifications