ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ: ಆರೋಪಿ ಶ್ರೇಯಸ್ ನಾಯ್ಕ್ ಎಸ್ಕೇಪ್
ಉಡುಪಿ, ಜೂನ್ 02: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿತ್ತು. ಇದೀಗ ಇದೇ ಮಾದರಿ ಎನ್ನಲಾದ ಘಟನೆ ಉಡುಪಿಯಲ್ಲಿ ನಡೆದಿದೆ. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಉಡುಪಿಯ ಆಸಾಮಿಯೊಬ್ಬನು ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿದು ಇಟ್ಟುಕೊಳ್ಳುತ್ತಿದ್ದ ಆರೋಪ ಕೇಳಿಬಂದಿದೆ.
ಉದ್ಯಮಿ ಶ್ರೇಯಸ್ ನಾಯ್ಕ (25) ಈ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದ್ದು, ಸದ್ಯ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಶ್ರೇಯಸ್ ನಾಯ್ಕ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಬಾಲಕಿಯೊಬ್ಬಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಬಾಲಕಿಯನ್ನು ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅತ್ಯಾಚಾರದ ದೃಶ್ಯ ಸೆರೆ ಹಿಡಿದು ಬಾಲಕಿಯನ್ನು ಹೆದರಿಸಿ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದ ಆರೋಪ ಕೇಳಿಬಂದಿದೆ. ಬಾಲಕಿ ಗರ್ಭವತಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ವಿಕೃತ ಕಾಮಿಯಂತೆ ಆಡುತ್ತಿದ್ದ ಶ್ರೇಯಸ್ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ತನ್ನ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಮೇ18 ರಂದು ಆರೋಪಿ ಶ್ರೇಯಸ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಲೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಶ್ರೇಯಸ್ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್‌ಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications