ಬಸವರಾಜು ಹಾಗೂ ಸೊಗಡು ಶಿವಣ್ಣ ಮಧ್ಯೆ ಸಂಧಾನ ಮಾಡಿದರು ಬಿಎಸ್ ವೈ
ತುಮಕೂರು, ಮಾರ್ಚ್ 24: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮಧ್ಯೆ ಭಿನ್ನಾಭಿಪ್ರಾಯವನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಬಗೆಹರಿಸಿದಂತಿದೆ. ಸಿದ್ದಗಂಗಾ ಮಠಕ್ಕೆ ತೆರಳಿದ್ದ ಬಿಎಸ್ ವೈ, ಜಿಎಸ್ ಬಸವರಾಜು ಆ ನಂತರ ಸೊಗಡು ಶಿವಣ್ಣ ಅವರ ಮನೆಗೆ ತೆರಳಿದ್ದರು.
ಆ ವೇಳೆ ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಬಿ.ಸುರೇಶ್ ಗೌಡ ಮತ್ತಿತರರು ಇದ್ದರು. ಸೊಗಡು ಶಿವಣ್ಣ ಮಾತನಾಡಿ, ನರೇಂದ್ರ ಮೋದಿ ಅವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಕ್ಕೆ. ನಮ್ಮ ಪಾಲಿಗೆ ಯಡಿಯೂರಪ್ಪ ಅವರೇ ನಾಯಕರು. ಅವರ ಮಾರ್ಗದರ್ಶನದ ಪ್ರಕಾರವೇ ಇನ್ನು ಮುಂದೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ನಮ್ಮ ಜಿಲ್ಲೆಗೆ ಹಿರಿಯರ ಮಾರ್ಗದರ್ಶನ ಇರಲಿಲ್ಲ. ನನ್ನ ಕಾರ್ಯಕರ್ತರು, ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಅವರು ಪ್ರೀತಿ ತೋರಿಸಿದರೆ ಸಾಕು. ಯಡಿಯೂರಪ್ಪ ಅವರ ವಿರುದ್ಧ ನನ್ನ ಹೊಟ್ಟೆಯಲ್ಲಿ ಯಾವುದೇ ಸಿಟ್ಟಿಲ್ಲ. ಅವರ ವಿರುದ್ಧ ಸಿಟ್ಟು ಮಾಡಿಕೊಂಡರೆ ನನ್ನಿಂದ ಏನು ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ನಾಳೆಯಿಂದಲೇ ಜಿಲ್ಲೆಯಲ್ಲಿ ಬಿಜೆಪಿಗಾಗಿ ಕೆಲಸ ಆರಂಭ ಮಾಡುತ್ತೇವೆ. ಯಡಿಯೂರಪ್ಪ ಅವರು ನಮ್ಮ ಕಾರ್ಯಕರ್ತರಿಗೆ ಪ್ರೀತಿ ತೋರಿಸಿದರೆ ನಾವು ಮುಂದಿನ ಕೆಲಸ ಮಾಡಿಕೊಂಡು ಹೋಗುತ್ತೇವೆ. ಈ ಹಿಂದೆ ಮಲ್ಲಿಕಾರ್ಜುನಯ್ಯ ಗೆದ್ದಿದ್ದಾಗ ಬೂತ್ ಗಳಲ್ಲಿ ಕೂಡ ನಮ್ಮ ಕಾರ್ಯಕರ್ತರು ಇಲ್ಲದಿದ್ದರೂ ಗೆಲ್ಲಿಸಿಕೊಂಡಿದ್ದೆವು ಎಂದಿದ್ದಾರೆ.
ಇನ್ನು ಯಡಿಯೂರಪ್ಪ ಅವರು ಮಾತನಾಡಿ, ಶಿವಣ್ಣ ಅವರಿಗೆ ನಮ್ಮ ಕಡೆಯಿಂದ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲಾಗುವುದು. ಈ ಬಾರಿ ಲೋಕಸಭೆ ಚುನಾವಣೆ ಆದ ಮೇಲೆ ಪಕ್ಷದೊಳಗೋ ಅಥವಾ ನಾವೇ ರಚನೆ ಮಾಡಲು ಸಾಧ್ಯವಾದರೆ ಸರಕಾರದೊಳಗೋ ಉತ್ತಮ ಸ್ಥಾನ ಮಾನ ನೀಡಲಾಗುವುದು ಎಂದಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಎಚ್.ಡಿ.ದೇವೇಗೌಡ ಕಣದಲ್ಲಿದ್ದರೆ, ಹಾಲಿ ಸಂಸದ ಮುದ್ದಹನುಮೇಗೌಡರು, ನಾನು ಕಾಂಗ್ರೆಸ್ ನಿಂದಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ಹಠ ಹಿಡಿದಿದ್ದಾರೆ. ಫೀಲ್ಡಿಗಿಳಿದ ಯಡಿಯೂರಪ್ಪ ಅವರೇನೋ ಬಿಜೆಪಿಯೊಳಗಿನ ಅಸಮಾಧಾನ ತಣ್ಣಗಾಗಿಸಿದ್ದಾರೆ. ಹಾಗಿದ್ದರೆ ಮುಂದೇನು?












Click it and Unblock the Notifications