ತುಮಕೂರು; ಕಾರು ಶೋ ರೂಂ ಸಿಬ್ಬಂದಿಗೆ ಪಾಠ ಕಲಿಸಿದ ಯುವ ರೈತ!
ತುಮಕೂರು, ಜನವರಿ 23; ಕಾರು ಶೋ ರೂಂ ಸೇಲ್ಸ್ ಏಜೆಂಟ್ ಮಾಡಿದ ಅವಮಾನಕ್ಕೆ ಯುವ ರೈತ ತಕ್ಕ ಪಾಠ ಕಲಿಸಿದ್ದಾನೆ. 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯುವ ರೈತನ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರಿನ ರಾಮನಪಾಳ್ಯದಲ್ಲಿ ಈ ಘಟನೆ ನಡೆದಿದೆ. ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕೆಂಪೇಗೌಡ ಎನ್ನುವ ಯುವ ರೈತ ಶೋ ರೂಂಗೆ ಬೋಲೆರೋ ಗೂಡ್ಸ್ ವಾಹನ ಖರೀದಿಗಾಗಿ ಆಗಮಿಸಿದ್ದರು.
ಆದರೆ ಕೆಂಪೇಗೌಡ ವೇಷಭೂಷಣ ನೋಡಿದ ಶೋ ರೂಂ ಸೇಲ್ಸ್ ಏಜೆಂಟ್‌ಗಳು ಅವಮಾನ ಮಾಡಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದು ಅವರ ಮುಂದಿಟ್ಟು ತಕ್ಷಣ ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾನೆ.

ಮಾಡಿದ ತಪ್ಪಿನ ಅರಿವಾದ ಸೇಲ್ಸ್ ಏಜೆಂಟ್‌ಗಳು ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಕೆಂಪೇಗೌಡನನ್ನು ವಾಪಸ್ ಕಳಿಸಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ವಿವರ; ಜನವರಿ 4ರಂದು ಕೆಂಪೇಗೌಡ ಶೋ ರೂಂಗೆ ಹೋಗಿ ಗೂಡ್ಸ್ ವಾಹನ ಬೇಕು ಎಂದು ಹೇಳಿಬಂದಿದ್ದರು. ಮೊನ್ನೆ 2 ಲಕ್ಷ ಹಣದೊಂದಿಗೆ ವಾಹನ ತರಲು ಹೋಗಿದ್ದರು.
ಆಗ ಶೋ ರೂಂ ಸೇಲ್ಸ್ ಏಜೆಂಟ್ ಸೇರಿದಂತೆ 7 ಜನರು ಕೆಂಪೇಗೌಡರ ಬಟ್ಟೆ ನೋಡಿ ತಮಾಷೆ ಮಾಡಿದ್ದಾರೆ. ನೀವು ವಾಹನ ತೆಗೆದುಕೊಂಡು ಹೋಗಲು ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ ಎಂದು ಅವಮಾನ ಮಾಡಿದ್ದಾರೆ.
ಸುಮ್ಮನೆ ಶೋ ರೂಂಗೆ ಬಂದಿದ್ದೀರಿ ಎಂದು ಸುಮಾರು 25 ನಿಮಿಷಗಳ ಕಾಲ ಕಿಚಾಯಿಸಿದ್ದಾರೆ. ಇದರಿಂದಾಗಿ ಅವಮಾನಗೊಂಡ ಕೆಂಪೇಗೌಡ ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದು ಏಜೆಂಟ್ ಮುಂದಿಟ್ಟು ತಕ್ಷಣ ವಾಹನ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಕ್ಯಾಂಟರ್ ಚಾಲಕರಾಗಿರುವ ಕೆಂಪೇಗೌಡ ಹೊಸ ವಾಹನ ಖರೀದಿ ಮಾಡಲು ಬಯಸಿದ್ದರು. ಆದರೆ ಅವರ ವೇಷಭೂಷಣ ನೋಡಿ ಸೇಲ್ಸ್ ಏಜೆಂಟ್ ಅವಮಾನ ಮಾಡಿ ಸರಿಯಾದ ಪಾಠ ಕಲಿತಿದ್ದಾರೆ.
ದಿಗ್ಗಜರು ಸಿನಿಮಾದ ದೃಶ್ಯ; ದಿ. ವಿಷ್ಣುವರ್ಧನ್, ದಿ. ಅಂಬರೀಶ್ ಅಭಿನಯದ 'ದಿಗ್ಗಜರು' ಸಿನಿಮಾದಲ್ಲಿ ಇದೇ ಮಾದರಿ ದೃಶ್ಯವಿದೆ. ಎಳ್ಳು ಮಾರಾಟ ಮಾಡಿದ ದುಡ್ಡನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಕಾರು ಖರೀದಿ ಮಾಡಲು ಇಬ್ಬರು ತೆರಳುತ್ತಾರೆ.
ಅಂಬರೀಶ್ ಪಂಚೆ, ಶಲ್ಯ ತೊಟ್ಟಿರುತ್ತಾರೆ. ಆಗ ಶೋ ರೂಂ ಸಿಬ್ಬಂದಿ ಕಾರು ಖರೀದಿ ಮಾಡುವವರು ಮುಖ ನೋಡಿ ಎಂದು ಅವಮಾನ ಮಾಡುತ್ತಾರೆ. ಎತ್ತಿನ ವ್ಯಾಪಾರ ಮಾಡಿ ಹೋಗಿ ಎಂದು ಲೇವಡಿ ಮಾಡುತ್ತಾರೆ.
ಆಗ ಗೋಣಿ ಚೀಲದಲ್ಲಿ ಇರುವ ದುಡ್ಡನ್ನು ಶೋ ರೂಂ ಸಿಬ್ಬಂದಿ ಮುಂದೆ ಸುರಿದು ಇದರಲ್ಲಿ 10 ಲಕ್ಷ ಇದೆ. 8 ನೀನು ಇಟ್ಟುಕೊಂಡು ಉಳಿದ ಎರಡು ಲಕ್ಷ ಮೂಟೆ ಕಟ್ಟು ಎಂದು ಶೋ ರೂಂ ಸಿಬ್ಬಂದಿಗೆ ಹೇಳುತ್ತಾರೆ.












Click it and Unblock the Notifications