Marriage Scam: ಮದುವೆಗೆ ಆತುರ ಪಟ್ಟರೆ ದೋಖಾ ಗ್ಯಾರಂಟಿ- ಮದುವೆಯಾಗದ ಅವಿವಾಹಿತರು ಈ ಸುದ್ದಿ ನೋಡಲೇಬೇಕು..
ತುಮಕೂರು ಆಗಸ್ಟ್ 13: ಮದುವೆ ಅನ್ನೋದು ಒಂದು ಸುಂದರ ಅನುಭವ. ಪ್ರತಿಯೊಬ್ಬರ ಜೀವನದಲ್ಲಿ ಇದೊಂದು ಮಧುರವಾದ ಸಮಯ. ಈ ಸಮಯಕ್ಕಾಗಿ ಪ್ರತಿಯೊಂದು ಹೆಣ್ಣು ಗಂಡು ಕಾತುರದಿಂದ ಕಾಯುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಈ ಶುಭ ಗಳಿಗೆಯನ್ನು ಮನದಾಳದಲ್ಲಿ ಸೆರೆಹಿಡಿದಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕನಸು. ಆದರೆ ಈ ಕನಸು ನನಸಾಗಿಸಲು ಹೋಗಿ ವ್ಯಕ್ತಿಯೊಬ್ಬ ಮೋಸ ಹೋಗಿದ್ದಾನೆ.
ಸಾಮಾನ್ಯವಾಗಿ ಮದುವೆ ಸಮಯ ಹತ್ತಿರವಾಗುತ್ತಿದ್ದಂತೆ ಗಂಡಾಗಲಿ ಹೆಣ್ಣಾಗಲಿ ಹಿನ್ನೆಲೆಯನ್ನು ತಿಳಿದುಕೊಳ್ಳದೇ ಸಿಕ್ಕಿದ್ದೇ ಶಿವಾ ಅಂತ ಮದುವೆ ಆಗಲು ಒಪ್ಪಿ ಬಿಡುತ್ತಾರೆ. ಹೀಗೆ ದಿಢೀರ್ ಅಂತ ಮದುವೆಗೆ ಒಪ್ಪಿದ್ದ ವರನೊಬ್ಬ ಸದ್ಯ ಹಣ ಒಡವೆಯನ್ನು ಕಳೆದುಕೊಂಡು ಮೋಸ ಹೋಗಿದ್ದಾನೆ.

ತುಮಕೂರಿನ ಗುಬ್ಬಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಹಿಳೆಯಿಂದ ಮೋಸ ಹೋಗಿದ್ದಾನೆ. ಇತ್ತೀಚೆಗೆ ಮದುವೆಯಾಗಲು ಗಂಡಿಗೆ ಹೆಣ್ಣು ಸಿಗುವುದು ಕಷ್ಟವಾಗಿ ಹೋಗಿದೆ. ಹೀಗಾಗಿ ಮಗ ದಯಾನಂದಮೂರ್ತಿಗೆ 37 ವರ್ಷ ಕಳೆದರೂ ಮದುವೆ ಆಗಿಲ್ಲ ಅಂತ ಪಾಲಾಕ್ಷಯ್ಯ ಚಿಂತೆಯಲ್ಲಿ ಮುಳಗಿದ್ದರು. ಮಗನಿಗೆ ಹೆಣ್ಣು ಹುಡುಕಲು ಹೈರಾಣಾಗಿದ್ದ ಕುಟುಂಬ ಯಾವುದೋ ಒಂದು ಹುಡುಗಿಯನ್ನ ಮದುವೆ ಮಾಡಿದರೆ ಸಾಕು ಅನ್ನೋ ಹಂತಕ್ಕೆ ಬಂದು ತಲುಪಿತ್ತು.
ಚಿನ್ನಾಭರಣದೊಂದಿಗೆ ಕಿಲಾಡಿ ಕಳ್ಳಿಯರು ಪರಾರಿ
ಇದಕ್ಕಾಗಿ ಪಾಲಾಕ್ಷಯ್ಯ ಬ್ರೋಕರ್ ಮೊರೆ ಹೋಗಿದ್ದರು. ಆದರೂ ಕೂಡ ಮಗನಿಗೆ ಕಂಕಣ ಭಾಗ್ಯ ಕೂಡಿ ಬರಲೇ ಇಲ್ಲ. ಹೀಗಾಗಿ ಊರು ಬಿಟ್ಟು ಬೇರೆಡೆ ಹುಡುಗಿಯನ್ನು ಹುಡುಕಲು ಪ್ರಾರಂಭಿಸಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬುವವರ ಮೂಲಕ ಲಕ್ಷ್ಮಿ ಎಂಬುವವರ ಪರಿಚಯವಾಗಿತ್ತು. ಆಕೆ ಮೂಲಕ ಮಗನಿಗೆ ಹುಡುಗಿ ನೋಡಲು ಪಾಲಾಕ್ಷಯ್ಯ ಮುಂದಾಗಿದ್ದರು.
ಈ ಸಮಯವನ್ನು ಬಳಸಿಕೊಂಡ ಲಕ್ಷ್ಮಿ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಕಥೆ ಕಟ್ಟಿದ್ದಳು. 'ಕೋಮಲಾ' ಎಂಬ ಹೆಸರಿನಲ್ಲಿ ಹುಡುಗಿಯ ಪೋಟೋ ಕಳುಹಿಸಿ. ಆಕೆಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು.

ಮದುವೆಯಾಗಲು ನಕಲಿ ಕುಟುಂಬ ಸೃಷ್ಟಿ
ಹುಡುಗನ ಕುಟುಂಬವನ್ನು ನಂಬಿಸಲು ಆಕೆಯ ಸಂಬಂಧಿಕರು ಎಂದು ಹೇಳಿಕೊಂಡು ಇನ್ನೂ ನಾಲ್ಕೈದು ಜನ ಕೂಡ ಆಕೆಯೊಂದಿಗೆ ಕರೆದುಕೊಂಡು ಬಂದಿದ್ದಳು. ಮಗನ ಮದುವೆ ತರಾತುರಿಯಲ್ಲಿದ್ದ ಪಾಲಾಕ್ಷಯ್ಯ ಹಿಂದೆಮುಂದೆ ಯೋಚನೆ ಮಾಡದೆ ಕಳೆದ ವರ್ಷ ನವೆಂಬರ್ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬದೊಂದಿಗೆ ಮದುವೆ ಫಿಕ್ಸ್ ಮಾಡಿಬಿಟ್ಟಿದ್ದಾರೆ. ಅಲ್ಲದೆ ಪಾಲಾಕ್ಷಯ್ಯ ಕುಟುಂಬಸ್ಥರೊಂದಿಗೆ ಮಾತಾಡಿ ನಕಲಿ ಕುಟುಂಬವೂ ಮದುವೆ ಮಾತುಕತೆ ಮುಗಿಸಿಬಿಟ್ಟಿತ್ತು.
ಇದರಿಂದಾಗಿ ಮಗನಿಗೆ ತುಂಬಾ ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದ ಪಾಲಾಕ್ಷಯ್ಯ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಿಂದೆಮುಂದೆ ಯೋಚನೆ ಮಾಡದೆ ಮಗನ ಮದುವೆ ತಯಾರಿ ಮಾಡೇಬಿಟ್ಟರು. ಮಾತುಕತೆ ನಡೆಸಿದ ಮರುದಿನವೇ ಗ್ರಾಮದ ದೇವಸ್ಥಾನದಲ್ಲಿ ಮದುವೆಗೆ ತಯಾರಿ ಮಾಡೇಬಿಟ್ಟಿದ್ದರು.
ವಧುವಿಗೆ ವರನ ಕಡೆಯವರಿಂದಲೇ ಚಿನ್ನಾಭರಣ
ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿ ಓಲೆ, 25 ಗ್ರಾಂ ಚಿನ್ನಾಭರಣ ಹಾಕಿದ್ದರು. ಅಲ್ಲದೆ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಮದುವೆಗೆ ಎಂಟು ಜನರನ್ನು ಕರೆ ತಂದು ಮದುವೆಯಾದ ಮರು ದಿನವೇ ಸಂಪ್ರದಾಯದ ನೆಪ ಒಡ್ಡಿ ಹೆಣ್ಣನ್ನು ತಾನೊಬ್ಬಳೇ ಕರೆದುಕೊಂಡು ಹೋಗಿದ್ದಳು ಲಕ್ಷ್ಮಿ.
ಈ ವೇಳೆ ಆಭರಣಗಳನ್ನು ಧರಿಸಿಕೊಂಡೇ ಹೋಗಿದ್ದ ಈ ಕಿಲಾಡಿ ಕಳ್ಳಿಯರು ವಾಪಸ್ ಆಗೇ ಇಲ್ಲ. ಆಗ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಬಳಿಕ ಅವರು ವಾಪಾಸ್ ಗುಬ್ಬಿಗೆ ಬಂದು ಎಲ್ಲರ ವಿರುದ್ಧ ದೂರು ದಾಖಲಿಸಿದ್ದಾರೆ.
ಸತತ ಒಂದು ವರ್ಷದ ಬಳಿಕ ಮೋಸಗಾತಿಯರನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೋಮಲಾ ಅಲಿಯಾಸ್ ಲಕ್ಷ್ಮಿ ಬಾಳಸಾಬ್ ಜನಕರ್ ಎಂಬಾಕೆಯದ್ದು ಮೂರು ವರ್ಷದಲ್ಲಿ ನಾಲ್ಕುನೇ ಮದುವೆ ಇದಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಸದ್ಯ ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿಯನ್ನು ಬಂಧಿಸಿದ್ದಾರೆ.












Click it and Unblock the Notifications