Tumakuru Lok Sabha seat: ತುಮಕೂರಿನಲ್ಲಿ ಜೆಸಿ ಮಾಧುಸ್ವಾಮಿ V/s ವಿ ಸೋಮಣ್ಣ: ಯಾರಿಗೆ ದಕ್ಕಲಿದೆ ಬಿಜೆಪಿ ಟಿಕೆಟ್!?
ತುಮಕೂರು, ಮಾರ್ಚ್ 12: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಎದುರು ಹಲವು ಸಮಸ್ಯೆಗಳು ತಲೆದೋರಿವೆ. ಈಗಾಗಲೇ ಏಳರಿಂದ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆಯೇ ಸಾಕಷ್ಟು ಪೈಪೋಟಿ ಇದೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಈ 7- 8 ಕ್ಷೇತ್ರಗಳಲ್ಲಿ ಕಲ್ಪತರು ನಾಡು ತುಮಕೂರು ಕೂಡ ಸೇರಿದೆ.
ಹೌದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರೇ ಎನ್‌ಡಿಎ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ತುಮಕೂರಿನಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಬೆಂಬಲಿಗರು ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರಿಸಿದ್ದು, ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿದೆ.

ಟಿಕೆಟ್ ಪಕ್ಕ ಎನ್ನಲಾಗಿರುವ ಮಾಜಿ ಸಚಿವ ವಿ ಸೋಮಣ್ಣ ವಿರುದ್ಧದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥರೂ ಆಗಿರುವ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಬೆಂಬಲಿಗರು ಪಾಲ್ಗೊಳ್ಳುವುದರೊಂದಿಗೆ ಇದು ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಟಿಕೆಟ್ ಆಕಾಂಕ್ಷಿಯೂ ಆಗಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಿ ಸೋಮಣ್ಣನವರನ್ನು ಹೊರಗಿನವರು ಎಂದು ಕರೆದಿದ್ದಾರೆ. ಜೊತೆಗೆ ಕ್ಷೇತ್ರದ ಚಿಕ್ಕನಾಯಕನಹಳ್ಳಿ, ತಿಪಟೂರು ಮುಂತಾದ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಜೆಸಿ ಮಾಧುಸ್ವಾಮಿ ಅವರನ್ನು ಬಿಜೆಪಿ ಕಣಕ್ಕಿಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಹೊರಗಿನವರು!
ಇನ್ನು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ 'ಹೊರಗಿನವರು' ಟೀಕೆಗೆ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ವಾರಣಾಸಿಗೆ ಹೊರಗಿನವರು, ಅವರು 2014 ಮತ್ತು 2019 ರಲ್ಲಿ ಗೆದ್ದು 2024 ರಲ್ಲಿ ಕೂಡ ಅಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ ಎಂದು ಸೋಮಣ್ಣ ತಿರುಗೇಟು ನೀಡಿದ್ದಾರೆ.

ಭಾನುವಾರ ಜೆಸಿ ಮಾಧುಸ್ವಾಮಿ ಅವರ ಬೆಂಬಲಿಗ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಬೆಂಬಲಿಗರ ಜೊತೆಗೆ ಸಭೆ ನಡೆಸಿದ್ದು, ಪಕ್ಷದ ಟಿಕೆಟ್‌ಗಾಗಿ ಮಾಧುಸ್ವಾಮಿ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ವಿ ಸೋಮಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದು ಜೆಸಿ ಮಾಧುಸ್ವಾಮಿ ಮತ್ತು ಸೊಗಡು ಶಿವಣ್ಣ ಇಬ್ಬರಿಗೂ ನುಂಗಲಾರದ ತುತ್ತಾಗಿದೆ. ಬಿಎಸ್ ಯಡಿಯೂರಪ್ಪ ಅವರೊಂದಿಗೆ ದಶಕದ ಕಾಲ ಉತ್ತಮ ಬಾಂಧವ್ಯ ಹೊಂದಿರುವ ಜಿಎಸ್ ಬಸವರಾಜು ಇದೀಗ ವಿ ಸೋಮಣ್ಣ ಜತೆ ಕೈ ಜೋಡಿಸಿದ್ದಾರೆ.
ಇತ್ತ, ಸಿದ್ದಗಂಗಾ ಮಠದ ಮುಖ್ಯಸ್ಥ ಸಿದ್ದಲಿಂಗ ಸ್ವಾಮಿಗಳು ತಮ್ಮ ಸೋದರಸಂಬಂಧಿ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಎಸ್.ಪರಮೇಶ್ ಅವರೊಂದಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ವಿ ಸೋಮಣ್ಣ ಅವರ ಪರವಾಗಿ ನಿಂತಿದ್ದು, ಅವರಿಗೆ ಅಪಾಯಿಂಟ್‌ಮೆಂಟ್ ನೀಡಲಿಲ್ಲ ಎಂದು ವರದಿಯಾಗಿದೆ.
ತುಮಕೂರಿನಲ್ಲಿ ಕಾಂಗ್ರೆಸ್ ಪ್ರಚಾರ ಆರಂಭ
ಇನ್ನು, ತುಮಕೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದನುಮೇಗೌಡ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಸೋಮವಾರ ಮಧುಗಿರಿ ತಾಲೂಕಿನ ದೊಡ್ಡದಲವಟ್ಟ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇವರೊಂದಿಗೆ ಅನೇಕ ಬೆಂಬಲಿಗರು ಮತ್ತು ಮೊದಲಿನಿಂದಲೂ ಅವರ ಜೊತೆಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇದ್ದರು.












Click it and Unblock the Notifications