ತುಮಕೂರು-ದಾವಣಗೆರೆ ರೈಲು ಮಾರ್ಗ ವಿಳಂಬ
ತುಮಕೂರು, ನವೆಂಬರ್ 29 : ತುಮಕೂರು- ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗದ ಕಾಮಗಾರಿ ವಿಳಂಬವಾಗಲಿದೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನವನ್ನು ಇನ್ನೂ ಪೂರ್ಣಗೊಳಿಸಿಲ್ಲ.
191 ಕಿ. ಮೀ. ದೂರದ ಯೋಜನೆಯನ್ನು 2010-11ರಲ್ಲಿ ಘೋಷಣೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50:50ರ ಅನುಪಾತದಲ್ಲಿ ಯೋಜನೆಯನ್ನು ಜಾರಿಗೆ ತರುತ್ತಿವೆ. ಆದರೆ, ಭೂ ಸ್ವಾಧೀನ ವಿಳಂಬವಾದ ಕಾರಣ ಕಾಮಗಾರಿಯೂ ನಿಧಾನವಾಗುತ್ತಿದೆ.
ಯೋಜನೆಗೆ 2,246.06 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ಸರ್ಕಾರ ಇದುವರೆಗೂ 135.66 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿದೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಸ್ಥಗಿತವಾಗಿದೆ.

ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ರೈತರು ತುಮಕೂರು ಜಿಲ್ಲೆಯಲ್ಲಿ ಭೂಮಿ ನೀಡಿದ್ದಾರೆ. ಇದಕ್ಕೆ ಅವರಿಗೆ ಎಕರೆಗೆ 40 ಲಕ್ಷ ಪರಿಹಾರ ಸಿಕ್ಕಿದೆ. ರೈಲ್ವೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಎಕರೆಗೆ 20 ಲಕ್ಷ ಪರಿಹಾರ ನೀಡಲಾಗುತ್ತದೆ.
ಹಲವು ರೈತರು ಇದನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳು ವಿಚಾರಣೆ ಹಂತದಲ್ಲಿವೆ. ಆದ್ದರಿಂದ, ಭೂಸ್ವಾಧೀನ ಕಾರ್ಯ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶ ಬಂದರೆ ಪುನಃ ಕಾರ್ಯ ಆರಂಭವಾಗಲಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವಾಗಬೇಕು ಎಂಬುದು ಮೂರು ಜಿಲ್ಲೆಗಳ ಜನರ ದಶಕಗಳ ಕನಸು. ಆದರೆ, ಬಹುಕಾಲ ಯೋಜನೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
2010-11ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ಯೋಜನೆಗೆ ಶೇ 50ರಷ್ಟು ವೆಚ್ಚ ಭರಿಸುವುದಾಗಿ ಹೇಳಿ ಕೇಂದ್ರದಿಂದ ಒಪ್ಪಿಗೆ ಪಡೆದಿತ್ತು. ಆದರೆ, ಭೂಸ್ವಾಧೀನದ ವಿಚಾರ ಇನ್ನೂ ಬಗೆಹರಿಯದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.
ಈ ರೈಲು ಯೋಜನೆ ಪೂರ್ಣಗೊಂಡರೆ ಬೆಂಗಳೂರು-ವಿಜಯಪುರ ನಡುವಿನ ಅಂತರ 65 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ಒತ್ತಡ ಶೇ 50ರಷ್ಟು ಕಡಿಮೆಯಾಗಲಿದೆ.











Click it and Unblock the Notifications