Tiptur Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಧಾರಣೆ ದಾಖಲೆಯ ಏರಿಕೆ..
Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟಯಲ್ಲಿ ಕೊಬ್ಬರಿ ಧಾರಣೆ ಭಾರಿ ಏರಿಕೆ ಕಂಡಿದೆ. ಇದರಿಂದ ತೆಂಗು ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಕಳೆದ ಅಕ್ಟೋಬರ್ ಮೊದಲ ವಾರದವರೆಗೆ ಸತತ ಇಳಿಕೆ ಕಂಡು ಆತಂಕ ಮೂಡಿಸಿದ್ದ ಉಂಡೆ ಕೊಬ್ಬರಿ ಬೆಲೆಯಲ್ಲಿ ಇದೀಗ ದಿಢೀರ್ ಚೇತರಿಕೆ ಕಂಡುಬಂದಿದೆ. ಏಷ್ಯಾ ಖಂಡದಲ್ಲೇ ಪ್ರಸಿದ್ಧ ಪಡೆದಿರುವ ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಅಕ್ಟೋಬರ್ 22ರ ಗುರುವಾರ ನಡೆದ ಟೆಂಡರ್‌ನಲ್ಲಿ ಉಂಡೆ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ ₹34,599ಕ್ಕೆ ಮಾರಾಟವಾಗುವ ಮೂಲಕ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಮೂರು ದಿನಗಳಲ್ಲಿ ಕೊಬ್ಬರಿ ಧಾರಣೆ ಭಾರಿ ಏರಿಕೆ
ಅಕ್ಟೋಬರ್ 19ರ ಸೋಮವಾರ ನಡೆದಿದ್ದ ಟೆಂಡರ್ ವಹಿವಾಟಿನಲ್ಲಿ ಉಂಡೆ ಕೊಬ್ಬರಿ ಕ್ವಿಂಟಾಲ್‌ಗೆ ಕನಿಷ್ಠ ₹28,000 ಹಾಗೂ ಗರಿಷ್ಠ ₹32,500 ದರದಲ್ಲಿ ಮಾರಾಟವಾಗಿತ್ತು. ಆದರೆ ಕೇವಲ ಮೂರೇ ದಿನಗಳ ಅಂತರದಲ್ಲಿ, ಅಂದರೆ ಅಕ್ಟೋಬರ್ 22ರ ಗುರುವಾರದ ಟೆಂಡರ್ ವೇಳೆಗೆ ಕನಿಷ್ಠ ದರವು ₹30,500ಗೆ ಜಿಗಿದಿದ್ದರೆ, ಗರಿಷ್ಠ ದರವು ಬರೋಬ್ಬರಿ ₹34,599ಗೆ ತಲುಪಿದೆ. ಈ ಮೂಲಕ ಕೇವಲ ಮೂರು ದಿನಗಳ ಅವಧಿಯಲ್ಲಿ ಗರಿಷ್ಠ ದರದಲ್ಲಿ ಕ್ವಿಂಟಾಲ್‌ಗೆ ₹2,599ಗಳಷ್ಟು ಭಾರಿ ಏರಿಕೆ ದಾಖಲಾಗಿದೆ.
ಗುರುವಾರ ನಡೆದ ಟೆಂಡರ್‌ನಲ್ಲಿ ಮಾರುಕಟ್ಟೆಗೆ ಒಟ್ಟು 2,432 ಕ್ವಿಂಟಾಲ್ ಕೊಬ್ಬರಿ ಆವಕವಾಗಿತ್ತು. ಉತ್ತಮ ಗುಣಮಟ್ಟದ ಹಾಗೂ ಒಣಗಿದ ಉಂಡೆ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ಕಂಡುಬಂದಿದ್ದು, ಉತ್ತಮ ಬೆಲೆ ದೊರೆಯುತ್ತಿರುವುದು ಕಲ್ಪತರು ನಾಡಿನ ಬೆಳೆಗಾರರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ. ಬೆಲೆಯಲ್ಲಿ ಕಂಡುಬಂದಿರುವ ಈ ಚೇತರಿಕೆ ಮುಂದಿನ ದಿನಗಳಲ್ಲಿಯೂ ಹೀಗೆಯೇ ಮುಂದುವರಿಯಲಿದೆಯೇ ಎಂಬುದನ್ನು ಬೆಳೆಗಾರರು ಕಾತರದಿಂದ ಎದುರು ನೋಡುತ್ತಿದ್ದಾರೆ.
ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ಸಾಲು ಸಾಲು ಹಬ್ಬಗಳು ಹಾಗೂ ದೀಪಾವಳಿ ಹಬ್ಬ ಹತ್ತಿರ ಇರುವುದರಿಂದ ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಟೆಂಡರ್‌ಗಳಲ್ಲಿ ಮಾರುಕಟ್ಟೆಗೆ ಬರುವ ಆವಕದ ಪ್ರಮಾಣ, ಖರೀದಿದಾರರ ಬೇಡಿಕೆ ಮತ್ತು ಕೊಬ್ಬರಿಯ ಗುಣಮಟ್ಟಕ್ಕೆ ಅನುಗುಣವಾಗಿ ದರದಲ್ಲಿ ಮತ್ತಷ್ಟು ಬದಲಾವಣೆಯಾಗುವ ಹಾಗೂ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸತತ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕೊಬ್ಬರಿ ಬೆಳೆಗಾರರಿಗೆ ದೀಪಾವಳಿ ಸಮಯದಲ್ಲೇ ಈ ಬೆಲೆ ಏರಿಕೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ ಎಂದರೆ ತಪ್ಪಾಗಲಾರದು.
ತಿಪಟೂರು ಕೊಬ್ಬರಿಯ ವಿಶೇಷತೆಗಳು
* ಇತರ ಕಡೆಗಳಂತೆ ತೆಂಗಿನಕಾಯಿಯನ್ನು ಒಡೆದು ಒಣಗಿಸುವುದಿಲ್ಲ. ಬದಲಾಗಿ, ನಾರು ತೆಗೆದ ಇಡೀ ತೆಂಗಿನಕಾಯಿಯನ್ನು ಮರದ ಅಟ್ಟಗಳ ಮೇಲೆ ಇಟ್ಟು, ತಿಂಗಳ ಕಾಲ ಯಾವುದೇ ರಾಸಾಯನಿಕಗಳಿಲ್ಲದೆ ಸಂಪೂರ್ಣವಾಗಿ ನೈಸರ್ಗಿಕ ವಾತಾವರಣದಲ್ಲೇ ಒಣಗಿಸಲಾಗುತ್ತದೆ.
* ಸಾಮಾನ್ಯವಾಗಿ ಕೊಬ್ಬರಿ ಚೂರುಗಳ ರೂಪದಲ್ಲಿದ್ದರೆ, ತಿಪಟೂರು ಕೊಬ್ಬರಿ ಸಂಪೂರ್ಣ ಗೋಲಾಕಾರದ ರೂಪದಲ್ಲಿರುತ್ತದೆ.
* ತಿಪಟೂರು 'ಟಿಪ್ಟೂರ್ ಟಾಲ್' ತೆಂಗಿನ ತಳಿಯಿಂದ ಸಿಗುವ ಕೊಬ್ಬರಿಯಲ್ಲಿ ಶೇಕಡಾ 65ರಿಂದ 68ರಷ್ಟು ಶುದ್ಧ ಎಣ್ಣೆಯ ಅಂಶವಿರುತ್ತದೆ. ಇದರಿಂದ ಇಲ್ಲಿನ ಕೊಬ್ಬರಿ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ.
* ಯಾವುದೇ ಕೆಮಿಕಲ್ ಇಲ್ಲದೆ ನೈಸರ್ಗಿಕವಾಗಿ ಒಣಗಿಸುವುದರಿಂದ ಈ ಕೊಬ್ಬರಿ ವರ್ಷಪೂರ್ತಿ ಕೆಡದಂತೆ, ಬೂಷ್ಟು ಹಿಡಿಯದಂತೆ ತಾಜಾವಾಗಿರುತ್ತದೆ.
ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣಗಳು
* ದೆಹಲಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ತಿಪಟೂರು ಉಂಡೆ ಕೊಬ್ಬರಿಗೆ ವಿಶೇಷ ಬೇಡಿಕೆಯಿದೆ. ಅಲ್ಲಿನ ಮನೆಗಳಲ್ಲಿ ಹಾಗೂ ಸಿಹಿತಿಂಡಿ ತಯಾರಿಕೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
* ಇದರ ಆಕರ್ಷಕ ಗೋಲಾಕಾರ ಹಾಗೂ ನೈಸರ್ಗಿಕ ತಯಾರಿಕೆಯಿಂದಾಗಿ, ದೇಶಾದ್ಯಂತ ಶುಭ ಕಾರ್ಯಗಳು, ಪೂಜೆ, ಹವನ ಮತ್ತು ಹಬ್ಬ-ಹರಿದಿನಗಳಲ್ಲಿ ತಿಪಟೂರು ಕೊಬ್ಬರಿಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
* ವಿಶೇಷವಾಗಿ ದೀಪಾವಳಿ, ನವರಾತ್ರಿ ಮತ್ತು ಮದುವೆ ಸೀಸನ್‌ಗಳಲ್ಲಿ ಡ್ರೈ ಫ್ರೂಟ್ಸ್ ರೂಪದಲ್ಲಿ ಮತ್ತು ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬಳಕೆಯಾಗುವುದರಿಂದ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ.
* ಔಷಧೀಯ ಗುಣ ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸುವ ಸ್ವಭಾವವಿರುವುದರಿಂದ ಆಯುರ್ವೇದ ಉದ್ಯಮ, ಕಾಸ್ಮೆಟಿಕ್ ಹಾಗೂ ಪ್ರಸಿದ್ಧ ಸ್ವೀಟ್ಸ್ ಕಂಪನಿಗಳು ತಿಪಟೂರು ಕೊಬ್ಬರಿಯನ್ನೇ ಬೃಹತ್ ಪ್ರಮಾಣದಲ್ಲಿ ಖರೀದಿಸುತ್ತವೆ. ಒಟ್ಟಿನಲ್ಲಿ ಸ್ವಾಭಾವಿಕ ಪರಿಶುದ್ಧತೆ, ವಿಶಿಷ್ಟ ರುಚಿ ಮತ್ತು ಸಾಂಪ್ರದಾಯಿಕ ಸಂಸ್ಕರಣಾ ವಿಧಾನವೇ ತಿಪಟೂರು ಕೊಬ್ಬರಿಯನ್ನು ಬ್ರ್ಯಾಂಡ್ ಮಾಡಿದ್ದು, ಮಾರುಕಟ್ಟೆಯಲ್ಲಿ ಸದಾ ಗರಿಷ್ಠ ಬೆಲೆ ಪಡೆಯುವಂತೆ ಮಾಡಿದೆ ಅಂತಲೇ ಹೇಳಬಹುದು.


Click it and Unblock the Notifications
