ತುಮಕೂರು ಬಳಿ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಮೂವರು ಯುವಕರ ದುರ್ಮರಣ
ತುಮಕೂರು, ಮೇ.08:ರಾಷ್ಟ್ರೀಯ ಹೆದ್ದಾರಿ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು ಘಟನೆ ಇಂದು ಬುಧವಾರ ಬೆಳಗ್ಗೆ 7.30ಕ್ಕೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನೆಲಹಾಳ ಸಮೀಪವಿರುವ ತಡೆಗೋಡೆಗೆ ಅತಿ ವೇಗವಾಗಿ ಬಂದ ಪಲ್ಸರ್ ಬೈಕ್ ಆಯತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂರು ಜನ ಗಂಭೀರವಾಗಿ ಗಾಯಗೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಅಪಘಾತದ ರಭಸಕ್ಕೆ ಬೈಕ್ ಡಿಕ್ಕಿ ಹೊಡೆದ ಸ್ಥಳದಿಂದ 500 ಮೀಟರ್ ಮುಂದಕ್ಕೆ ಹೋಗಿ ಬಿದ್ದಿದೆ. ಮೃತರ ಪೈಕಿ ಓರ್ವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಬೀರನಹಳ್ಳಿ ಗ್ರಾಮದ ನಿವಾಸಿ ಪೃಥ್ವಿರಾಜ್ ( 25) ಎಂದು ತಿಳಿದು ಬಂದಿದೆ.ಉಳಿದ ಇಬ್ಬರ ಹೆಸರು ಹಾಗು ವಿಳಾಸ ಪತ್ತೆಯಾಗಿಲ್ಲ.

ಅಪಘಾತದ ವಿಷಯ ತಿಳಿದ ಕೂಡಲೇ ಕೋರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶೇಷಾದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತಪಟ್ಟವರ ಶವಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಡಾಕ್ಟರ್ ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ ವೃತ್ತ ನಿರೀಕ್ಷಕ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಬಂದ ಮೂರು ಜನ ಯುವಕರು ಬೆಂಗಳೂರಿಗೆ ಬರುತ್ತಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಅಪಘಾತಕ್ಕೆ ಕಾರಣ ಏನೆಂಬುದು ತಿಳಿಯಬೇಕಾಗಿದೆ.












Click it and Unblock the Notifications