ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ
ತುಮಕೂರು, ಮೇ 19 : ಮಹಿಳೆಯೊಬ್ಬರ ಕುತ್ತಿಗೆಯಲ್ಲಿ ಬೆಳೆದಂತಹ ಅತ್ಯಂತ ವಿರಳ ಹಾಗೂ ಅಪರೂಪದ ಪಕ್ಕೆಲುಬನ್ನು ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಅತ್ಯಂತ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಲಕ್ಷಾಂತರ ರೂ. ವೆಚ್ಚವಾಗುವ ಈ ರೀತಿಯ ಶಸ್ತ್ರಚಿಕಿತ್ಸೆಯು ತುಮಕೂರು ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿದ್ದು, ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ.
ಕುತ್ತಿಗೆಯಲ್ಲಿ ಪಕ್ಕೆಲುಬು ಎಂದರೆ ಸಾಮಾನ್ಯವಾಗಿ ಪಕ್ಕೆಯಲ್ಲಿ ಬೆಳೆಯುವ ಎಲುಬು. ಮೂಳೆಗಳ ಬೆಳವಣಿಗೆಯ ಸಮಸ್ಯೆಯಿಂದಾಗಿ ಕುತ್ತಿಗೆ ಭಾಗದಲ್ಲಿ ಹೆಚ್ಚಿನ ಪಕ್ಕೆಲುಬಾಗಿ ಸುಮಾರು ಹತ್ತು ಸಾವಿರ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಮೂರನೇ ನಾಲ್ಕರಷ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೂರರಲ್ಲಿ ಒಬ್ಬರಿಗೆ ಕುತ್ತಿಗೆಯ ಎರಡೂ ಬದಿಯಲ್ಲಿ ಕಂಡುಬರುತ್ತದೆ.

ಈ ಹೆಚ್ಚಿನ ಕುತ್ತಿಗೆಯ ಪಕ್ಕೆಲುಬು ಕತ್ತಿನಿಂದ ತೋಳಿಗೆ ಬರುವ ಎಲ್ಲ ರಕ್ತನಾಳ ಮತ್ತು ನರಕೋಶಗಳನ್ನು ಸತತವಾಗಿ ಒತ್ತುತ್ತಿರುತ್ತದೆ. ಈ ಒತ್ತಡಕ್ಕೆ ಎಲ್ಲ ರಕ್ತನಾಳಗಳು ಮತ್ತು ನರಕೋಶಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಮುಂದೊಂದು ದಿನ ತೋಳು ಮತ್ತು ಕೈಗಳಿಗೆ ರಕ್ತ ಸಂಚಲನವು ಸಂಪೂರ್ಣವಾಗಿ ಸ್ಥಗಿತಗೊಂಡು ಗ್ಯಾಂಗ್ರಿನ್ ಉಂಟಾಗಿ ರೋಗಿಯು ಪೂರ್ಣವಾಗಿ ತನ್ನ ತೋಳು ಮತ್ತು ಕೈಗಳನ್ನು ಕಳೆದುಕೊಳ್ಳುತ್ತಾನೆ.
ಸಿರಾ ತಾಲ್ಲೂಕಿನ ಲಲಿತಾ (39 ವರ್ಷ) ಎಂಬುವರು ಹಲವಾರು ವರ್ಷಗಳಿಂದ ಕುತ್ತಿಗೆ, ತೋಳು, ಭುಜ ಮತ್ತು ಕೈಗಳಲ್ಲಿ ವಿಪರೀತವಾದ ನೋವಿನಿಂದ ನರಳುತ್ತಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಾಗ, ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಹಾಗೂ ಮೂರನೇ ಘಟಕದ ಮುಖ್ಯಸ್ಥ ಡಾ. ಬಿ.ಎಂ. ಮುರಳೀಧರ್ ಅವರು ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸಿದರು.
ಸಂದೇಹದ ಮೇರೆಗೆ ಕ್ಷಕಿರಣ (ಎಕ್ಸ್ ರೇ) ಮಾಡಿದಾಗ ಪಕ್ಕೆಲುಬು ಎಡಭಾಗದ ಕುತ್ತಿಗೆಗೆ ಸಂಪೂರ್ಣವಾಗಿ ಅಂಟಿಕೊಂಡು ಬೆಳೆದಿರುವುದು ಕಂಡುಬಂತು. ಹಲವಾರು ರೀತಿಯ ಪರೀಕ್ಷೆಯ ಮೂಲಕ ವಿಪರೀತವಾದ ನೋವಿಗೆ ಈ ಹೆಚ್ಚಿನ ಪಕ್ಕೆಲುಬು ಕಾರಣವೆಂದು ದೃಢಪಟ್ಟಿತು. ಇದೊಂದು ಅಪಾಯಕಾರಿ, ಕ್ಲಿಷ್ಟಕರ ಹಾಗೂ ಅತ್ಯಂತ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯಾಗಿತ್ತು. ಕಾರಣ ಪಕ್ಕೆಲುಬಿರುವ ಸ್ಥಳದಲ್ಲಿ ದೇಹದ ಸೂಕ್ಷ್ಮ ಸಂವೇದಿ ಉಸಿರಾಟವನ್ನು ನಿಯಂತ್ರಿಸುವ ನರಗಳಿದ್ದು, ಸ್ವಲ್ಪ ಏರುಪೇರಾದರೂ ರೋಗಿಯ ಪ್ರಾಣಕ್ಕೇ ಕುತ್ತುಂಟಾಗುವ ಸಂಭವವಿತ್ತು.

ಆಗ ಡಾ. ಮುರಳೀಧರ್ ಅವರು ಘಟಕದ ಮುಖ್ಯಸ್ಥರಾದ ಡಾ. ಡಿ.ಕೆ.ಗೋವಿಂದರಾಜು ಮತ್ತು ಡಾ. ಜಗನ್ನಾಥ್ ಅವರಲ್ಲಿ ಚರ್ಚಿಸಿ, ಜನರಲ್ ಸರ್ಜನ್ ಡಾ. ಕಿರಣ್ ಕುಮಾರ್ ಅವರೊಂದಿಗೆ 2 ಗಂಟೆಗಳ ಕಾಲ ಸತತ ಪರಿಶ್ರಮ ಹಾಗೂ ಚಾಕಚಕ್ಯತೆಯಿಂದ ಶಸ್ತ್ರಚಿಕಿತ್ಸೆ ನಡೆಸಿ, ರೋಗಿಗೆ ಯಾವುದೇ ಪ್ರಾಣಾಪಾಯವಿಲ್ಲದಂತೆ 7.5 ಸೆಂ.ಮೀ. ಉದ್ದ ಹಾಗೂ 1 ಸೆಂ.ಮೀ. ಸುತ್ತಳತೆಯ ಪಕ್ಕೆಲುಬನ್ನು ಹೊರತೆಗೆದರು. ಯಶಸ್ವೀ ಶಸ್ತ್ರಚಿಕಿತ್ಸೆಯ ನಂತರ ರೋಗಿ ಯಾವುದೇ ಸಮಸ್ಯೆಗಳಿಲ್ಲದೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಈ ಯಶಸ್ವಿ ಚಿಕಿತ್ಸೆಯ ರೂವಾರಿಗಳಾದ ಡಾ|| ಬಿ.ಎಂ.ಮುರಳೀಧರ್ (ಮೊಬೈಲ್: 99805 71234) ಅವರು ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್.ಮುಗಿಸಿ, ದೇಶದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆಸ್ಪತ್ರೆಗಳಲ್ಲಿ ಒಂದಾದ ದೆಹಲಿಯ ಮೇದಾಂತ ಮೆಡ್ ಸಿಟಿ, ಹೈದರಾಬಾದಿನ ಕಿಮ್ಸ್ ಆಸ್ಪತ್ರೆ ಸೇರಿದಂತೆ ಹಲವಾರು ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹಲವಾರು ವಿಭಾಗಗಳಲ್ಲಿ ಉನ್ನತ ವ್ಯಾಸಂಗವಾದ ಫೆಲೋಶಿಪ್‌ಗಳನ್ನು ಪಡೆದಿದ್ದಾರೆ. ಈ ಹಿಂದೆಯೂ ಹಲವಾರು ಅಪರೂಪದ ಶಸ್ತ್ರಚಿಕಿತ್ಸೆಗಳನ್ನು ದೆಹಲಿ ಮತ್ತು ಆಂಧ್ರಪ್ರದೇಶಗಳಲ್ಲಿ ಯಶಸ್ವಿಯಾಗಿ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾಲೇಜಿನ ನಿರ್ದೇಶಕರಾದ ಡಾ|| ಶಿವಪ್ರಸಾದ್, ವಿಭಾಗದ ಮುಖ್ಯಸ್ಥರಾದ ಡಾ||ಜೆ.ಕೆ.ರೆಡ್ಡಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ|| ಶ್ರೀನಿವಾಮೂರ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications