Tumkur Bus Accident: ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ 8 ಜನರ ದುರ್ಮರಣ; 25ಕ್ಕೂ ಹೆಚ್ಚು ಜನರಿಗೆ ಗಾಯ
ತುಮಕೂರು, ಮಾರ್ಚ್ 19: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿದ್ದು, ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು ಜಿಲ್ಲೆ ವೈ.ಎನ್. ಹೊಸಕೋಟೆಯಿಂದ ಪಳವಳ್ಳಿಕಟ್ಟೆ ಮಾರ್ಗವಾಗಿ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಎಸ್.ವಿ.ಟಿ. ಎಂಬ ಖಾಸಗಿ ಬಸ್‌ನಲ್ಲಿ ಒಟ್ಟು 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಾಳುಗಳು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪಾವಗಡ ಗ್ರಾಮಾಂತರ ಪೊಲೀಸರು ಆಗಮಿಸಿದ್ದು, ಅಪಘಾತ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ.
ಪ್ರಯಾಣಿಕರು ಬಸ್ ಟಾಪ್‌ನಲ್ಲಿ ಕುಳಿತಿದ್ದರು. ಚಾಲಕನ ಅಜಾಗರೂಕತೆ ಚಾಲನೆಯಿಂದ ಪಳವಳ್ಳಿ ಕಟ್ಟೆಯ ಕೆರೆಯ ಬಳಿ ಬಸ್ ಪಲ್ಟಿಯಾಗಿದೆ. ಬಸ್ 90ರ ವೇಗದಲ್ಲಿ ಬಸ್ ಚಾಲನೆಯಾಗುತ್ತಿತ್ತು. ಕೆರೆ ಬಳಿಯ ಕಂಬಿಗೆ ಬಡಿದು ಪಲ್ಟಿಯಾಗಿದೆ.
ಪ್ರತಿದಿನ ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹತ್ತುತ್ತಾರೆ. ಟಾಪ್‌ನಲ್ಲಿದ್ದ ವಿದ್ಯಾರ್ಥಿಗಳು ಬಸ್ ಪಲ್ಟಿಯಾಗುತ್ತಿದ್ದಂತೆ ತೂರಿ ಹೋಗಿ ಬಿದ್ದಿದ್ದಾರೆ.
ಬಸ್‌ನಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಟಾಪ್‌ನಲ್ಲಿಯೇ 40 ಜನರು ಇದ್ದರು. ಸುಮಾರು 16 ಕಿ.ಮೀ ದೂರದವರೆಗೆ ಓವರ್ ಲೋಡ್ ಆಗಿ ಪ್ರಯಾಣಿಸುತ್ತಿತ್ತು. ಬಸ್ ಚಕ್ರಕ್ಕೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇದು ದುರದೃಷ್ಟಕರ ಘಟನೆ. ನನಗೆ ತಿಳಿದ ಮಾಹಿತಿ ಪ್ರಕಾರ 8 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಥಳಕ್ಕೆ ಹೋಗಲು ಸೂಚಿಸಿದ್ದೇನೆ. ಎಲ್ಲಾ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸೂಚಿಸಿದ್ದೇನೆ. ಆಂಬ್ಯುಲೆನ್ಸ್ ಕಳಿಸಿದ್ದು, ರಸ್ತೆ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು ಹೇಳಿದ್ದೇನೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.
ಶ್ರೀನಿವಾಸ್ ಮೂರ್ತಿ ಒಡೆತನದ ಎಸ್‌ವಿಟಿ ಬಸ್ ಇದಾಗಿದ್ದು, ಪ್ರತಿ ದಿನ ಪಾವಗಡ- ವೈ.ಎನ್. ಕೋಟೆ ಮಧ್ಯೆ ಈ ಬಸ್ ಸಂಚರಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಪಳವಳ್ಳಿಯ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸಿದ ಪಳವಳ್ಳಿ ಕಟ್ಟೆ ಬಳಿ ನೂರಾರು ಜನರು ಜಮಾವಣೆಯಾಗಿದ್ದಾರೆ.
ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಗಾಯಾಳುಗಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಲ ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.












Click it and Unblock the Notifications