ತುಮಕೂರು ಮಾಜಿ ಮೇಯರ್ ಗಡ್ಡ ರವಿ ಹತ್ಯೆ ಆರೋಪಿ ಮಲ್ಲೇಶ್ ಮೇಲೆ ಫೈರಿಂಗ್
ತುಮಕೂರು, ಅಕ್ಟೋಬರ್ 30: ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಧುಗಿರಿ ಮಲ್ಲೇಶ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಕಳೆದ ರಾತ್ರಿ ಆಂಧ್ರ ಪ್ರದೇಶದಲ್ಲಿ ಬಸ್‌ಸ್ಟ್ಯಾಂಡ್ ಒಂದರಲ್ಲಿ ಪತ್ತೆಯಾಗಿದ್ದ ಮಲ್ಲೇಶ್ ಎಂಬುವನನ್ನು ಬಂಧಿಸಿ ಮಧುಗಿರಿ ಮೂಲಕ ಕರ್ನಾಟಕಕ್ಕೆ ಕರೆ ತರುತ್ತಿದ್ದಾಗ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ, ಕೈಗೆ ಹಾಕಿದ್ದ ಲೀಡಿಂಗ್ ಚೈನ್ ನಿಂದ ಬೆಂಗಾವಲಿಗಿದ್ದ ಮುಖ್ಯ ಪೇದೆ ಸೈಮನ್ ವಿಕ್ಟರ್ ಅವರ ಕುತ್ತಿಗೆಗೆ ಬಲವಾಗಿ ಬಿಗಿದು, ತಳ್ಳಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ.
ಪೊಲೀಸರ ಮೇಲೆ ದಾಳಿ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಬಂಧನಕ್ಕೆ ತೆರಳಿದ್ದ ಇನ್‌ಸ್ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದ ತಂಡ ಮಲ್ಲೇಶ್ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಬಂಧನಕ್ಕೊಳಪಡಿಸಿತು. ಕಾಲಿಗೆ ತೀವ್ರ ಪ್ರಮಾಣದ ಗಾಯಗಳಾಗಿರುವುದರಿಂದ ಮಲ್ಲೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಕಳೆದ ತಿಂಗಳೂ ತುಮಕೂರಿನ ಹೊರವಲಯದಲ್ಲಿ ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ಬೆಳಗಿನ ಜಾವ ವಾಕಿಂಗ್ ಗೆ ಹೋಗಿದ್ದಾಗ ಹಾಲಿನ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ತುಮಕೂರು ಪೊಲೀಸರಿಗೆ ತೀವ್ರ ತಲೆನೋವಾಗಿ ಕಾಡಿತ್ತು.
ಅಪರಾಧ ಹಿನ್ನೆಲೆ ಹೊಂದಿದ್ದ ಮಾಜಿ ಮೇಯರ್ ಗಡ್ಡ ರವಿ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಹೇಳಲಾಗಿತ್ತು.ಇದೀಗ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು,ಹತ್ಯೆಗೆ ಕಾರಣ ಹೊರಬರಬೇಕಿದೆ.












Click it and Unblock the Notifications