ಜೆಸಿ ಮಾಧುಸ್ವಾಮಿ V/s ವಿ ಸೋಮಣ್ಣ: ಸೋಮಣ್ಣ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರಾ ಮಾಧುಸ್ವಾಮಿ!?
ತುಮಕೂರು, ಮಾರ್ಚ್ 15: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಟಿಕೆಟ್ ಹಂಚಿಕೆಯಾಗದ ಕ್ಷೇತ್ರಗಳ ತಲೆಬಿಸಿ ಒಂದೆಡೆಯಾದರೇ, ಟಿಕೆಟ್ ಹಂಚಿಕೆ ಮಾಡಿ ಕೆಲವೊಂದು ಕ್ಷೇತ್ರಗಳಲ್ಲಿ ಬಂಡಾಯ ಎದುರಿಸುತ್ತಿದೆ. ತಮ್ಮದೆ ಪಕ್ಷದ ನಾಯಕರು ತಮ್ಮ ಅಭ್ಯರ್ಥಿಯನ್ನು ಸೋಲಿಸಲು ಟೊಂಕಕಟ್ಟಿ ನಿಂತಿದ್ದಾರೆ ಈ ಸ್ಥಿತಿಯನ್ನು ಬಿಜೆಪಿ ಎದುರಿಸಬೇಕಿದೆ.
ಬಿಜೆಪಿಗೆ ತಲೆನೂವು ತಂದಿರುವ ಕ್ಷೇತ್ರಗಳಲ್ಲಿ ತುಮಕೂರು ಒಂದು. ಇಬ್ಬರು ಮಾಜಿ ಸಚಿವರ ಬಣ ಬಡಿದಾಟಕ್ಕೆ ಕಲ್ಪತರು ನಾಡು ಸಾಕ್ಷಿಯಾಗುತ್ತಿದೆ. ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಮತ್ತು ಮಾಜಿ ಸಚಿವ ವಿ ಸೋಮಣ್ಣ ಇಬ್ಬರ ನಡುವಿನ ಈ ಗೊಂದಲಗಳು ಬೂದಿ ಮುಚ್ಚಿದ ಕೆಂಡವೇನಲ್ಲ. ಮಾಧುಸ್ವಾಮಿ ಬೆಂಬಲಿಗರು ಟಿಕೆಟ್ ಘೋಷಣೆಯಾಗುವುದಕ್ಕಿಂತ ಮುಂಚೆಯಿಂದಲೂ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ.

ಈಗ ಬಿಜೆಪಿ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ತುಮಕೂರಿಗೆ ತಂದು ನಿಲ್ಲಿಸಿದ್ದು, ಸ್ಥಳೀಯ ನಾಯಕ ಜೆಸಿ ಮಾಧುಸ್ವಾಮಿಗೆ ನುಂಗಲಾರದ ತುತ್ತಾಗಿದ. ಇದನ್ನು ಬಹಿರಂಗವಾಗಿಯೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಧುಸ್ವಾಮಿ ಲೋಕಸಭಾ ಟಿಕೆಟ್‌ಗೆ ಟವಲ್ ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಹೊರಗಿನಿಂದ ಬಂದ ವಿ. ಸೋಮಣ್ಣ ಅವರಿಗೆ ಮಣೆ ಹಾಕಿದೆ.
ಜೆಸಿ ಮಾಧುಸ್ವಾಮಿಯ ರಾಜಕೀಯ ಎದುರಾಳಿ ಜೆಡಿಎಸ್. ಚಿಕ್ಕನಾಯಕನಹಳ್ಳಿಯಲ್ಲಿ ಇಷ್ಟು ವರ್ಷಗಳ ಕಾಲ ಜೆಡಿಎಸ್ ವಿರುದ್ಧ ಸ್ಪರ್ಧಿಸಿ ಗೆಲುವು, ಸೋಲು ಕಂಡಿರುವ ಅವರಿಗೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದೇ ನುಂಗಲಾರದ ತುತ್ತಾಗಿದೆ. ನಿಷ್ಠುರ ರಾಜಕಾರಣಿ ಎನಿಸಿಕೊಂಡಿರುವ ಅವರಿಗೆ ಈಗ ಟಿಕೆಟ್ ಕೂಡ ನೀಡದೆ ಇರುವುದು ಅವರ ಕೋಪ ಹೆಚ್ಚಾಗಲು ಮತ್ತಷ್ಟು ಕಾರಣ.
ಮಾಧುಸ್ವಾಮಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುವ ಹಾಲಿ ಸಂಸದ ಜಿ.ಎಸ್ ಬಸವರಾಜು ಅವರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಮಾಧುಸ್ವಾಮಿ ಅವರನ್ನು ತುಳಿಯುವ ಒಂದು ತಂತ್ರ ಎನ್ನಲಾಗಿದೆ. ವಿ ಸೋಮಣ್ಣ ತುಮಕೂರಿನಿಂದ ಅದೃಷ್ಟವಶಾತ್ ಗೆದ್ದರೇ ಮಾಧುಸ್ವಾಮಿ ರಾಜಕೀಯ ಭವಿಷ್ಯಕ್ಕೆ ನಿಜಕ್ಕೂ ಆಪತ್ತು ಬರಲಿದೆ. ಹೀಗಾಗಿಯೇ ಮಾಧುಸ್ವಾಮಿ ಒಳಗೊಳಗೆ ಸೋಮಣ್ಣ ಸೋಲಿಗೆ ಹಪಹಪಿಸುತ್ತಿದ್ದು, ಅವರ ಸೋಲನ್ನೇ ಬಯಸುತ್ತಿದ್ದಾರೆ.

ಇನ್ನು, ಈ ಇಬ್ಬರು ಮಾಜಿ ಸಚಿವರ ಒಳ ಜಗಳ ಮಾತ್ರ ಲಾಭವಾಗುವುದು ಕಾಂಗ್ರೆಸ್‌ಗೆ. ತುಮಕೂರಿನಿಂದ ಈ ಹಿಂದೆ ಸಂಸದರಾಗಿದ್ದ ಮುದ್ದಹನುಮೇಗೌಡ ಈ ಬಾರಿಯೂ ಕಣಕ್ಕಿಳಿಯುತ್ತಿದ್ದು, ಮಾಧುಸ್ವಾಮಿ ಮತ್ತು ವಿ ಸೋಮಣ್ಣ ಜಗಳ ಇವರಿಗೆ ಲಾಭವಾಗಲಿದೆ. ಕಾಂಗ್ರೆಸ್ ಕೂಡ ಇದನ್ನೇ ಲಾಭ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ಸೋಮಣ್ಣಗೆ ಟಿಕೆಟ್: ಬಿಜೆಪಿ ಬೆಂಬಲಿಗರು ಬೃಹತ್ ಪ್ರತಿಭಟನೆ
ಇನ್ನು, ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಲೋಕಸಭೆ ಟಿಕೆಟ್ ನೀಡುವುದನ್ನು ವಿರೋಧಿಸಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಟಿಕೆಟ್ ಘೋಷಣೆಯಾದ ನಂತರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತಿಪಟೂರು ತಾಲೂಕಿನ ಕೆಬಿ ಕ್ರಾಸ್, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲೂಕುಗಳ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ನಡೆಸಿದರು.
ಸೋಮಣ್ಣ ತುಮಕೂರು ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ ಹೀಗಾಗಿ ಲೋಕಸಭೆ ಟಿಕೆಟ್ ನೀಡಬಾರದು ಎಂದು ಪ್ರತಿಭಟನಾಕಾರರು ಸಭೆಯಲ್ಲಿ ಹೇಳಿದರು. ಸೋಮಣ್ಣ ಬದಲು ಜೆಸಿ ಮಾಧುಸ್ವಾಮಿಗೆ ಟಿಕೆಟ್ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಕ್ಷೇತ್ರಕ್ಕೆ ವಲಸೆ ಬಂದಿರುವ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಬಿಜೆಪಿ ಕಾರ್ಯಕರ್ತರು ಸೋಮಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications