ಮಾಧುಸ್ವಾಮಿ ವಿರುದ್ಧ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕೆಎನ್ ರಾಜಣ್ಣ ಆಹ್ವಾನ
ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆಗೆ ಮತ್ತೊಂದು ವಿಧಾನಸಭಾ ಕ್ಷೇತ್ರ ಸೇರ್ಪಡೆಯಾಗಿದ್ದು, ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಹಾಲಿ ಬಿಜೆಪಿ ಶಾಸಕ ಮಾಧುಸ್ವಾಮಿ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ.
ತುಮಕೂರು, ಜನವರಿ. 31: ರಾಜ್ಯ ರಾಜಕೀಯದಲ್ಲಿ ಚುನಾವಣೆಗೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆಯದ್ದೇ ಚಿಂತೆ. ಅವವರು ಹೈಕಮಾಂಡ್ ಹೇಳಿದರೇ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಆದರೂ ಈ ವಿಚಾರದಲ್ಲಿ ಅವರಿಗೆ ಆಹ್ವಾನ ಬರುವುದು ಮಾತ್ರ ನಿಂತಿಲ್ಲ.
ಈಗ ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಹಾಲಿ ಬಿಜೆಪಿ ಶಾಸಕ ಮಾಧುಸ್ವಾಮಿ ವಿರುದ್ಧ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವಂತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಹ್ವಾನ ನೀಡಿದ್ದಾರೆ.
ಸೋಮವಾರ ಸಚಿವ ಮಾಧುಸ್ವಾಮಿ ಹಾಲು ಕುಡಿಯುವ ಮಗುವಿನ ಜೊತೆ ನಾನು ಸ್ಪರ್ಧೆ ಮಾಡುವ ಕರ್ಮ ನನ್ನದಾಗಿದೆ . ಸಿದ್ದರಾಮಯ್ಯ ಅವರಂತಹ ನಾಯಕರ ಜೊತೆ ಪೈಪೋಟಿ ಮಾಡಬೇಕು ನಾನು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ತುಮಕೂರಿನ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸಚಿವ ಮಾಧುಸ್ವಾಮಿ ವಿರುದ್ಧವೇ ಕಣಕ್ಕಿಳಿಯುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.
"ನಾನು ಸಿದ್ದರಾಮಯ್ಯ ಅವರಂತಹ ನಾಯಕರ ಜೊತೆ ಪೈಪೋಟಿ ಮಾಡಬೇಕು. ಹಾಲು ಕುಡಿಯುವ ಮಕ್ಕಳ ಜೊತೆ ಚುನಾವಣೆ ಎದುರಿಸುವ ದುಸ್ಥಿತಿ ನಮಗೆ ಬಂದಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧೆಗೆ ಒಪ್ಪಿದರೆ ನಾವೆಲ್ಲ ಒಂದಾಗಿ ಅವರನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ಅವರು ಸ್ಪರ್ಧಿಸಲ್ಲ ಎಂದರೆ ತಾಲೂಕಿನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು" ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ.

ಇನ್ನು, ಜಿಲ್ಲಾ ಪಂಚಾಯಿತಿ ಸದಸ್ಯ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸಿ. ಸಿದ್ದರಾಮಯ್ಯ ಕೂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿಯುವಂತೆ ಆಹ್ವಾನ ನೀಡಿ, ಪತ್ರ ಬರೆದಿದ್ದಾರೆ. ನನ್ನ ಕೋರಿಕೆಯಂತೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಿಂದ ಇಡೀ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನೆಲೆ ಕಳೆದುಕೊಳ್ಳುತ್ತದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರವು ನಿಮಗೆ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕುರುಬ, ಯಾದವ, ಮುಸ್ಲಿಂ, ನಾಯಕರ ಮತಗಳು ನಿರ್ಣಾಯಕವಾಗಿದೆ. ಈ ನಿರ್ಣಾಯಕ ಮತಗಳಿಂದ ತಾವು ಪ್ರಚಂಡ ಜಯಭೇರಿ ಪಡೆಯಬಹುದಾಗಿದೆ ಎಂದು ವೈ. ಸಿ. ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು, ಸಚಿವ ಜೆಸಿ ಮಾಧುಸ್ವಾಮಿ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಮ್ಮ ವಿರುದ್ಧ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಬೇಕಾಗಿಲ್ಲ. ನಿಮ್ಮ ವಿರುದ್ಧ ಒಂದಲ್ಲ ಎರಡಲ್ಲ 6 ಚುನಾವಣೆ ಎದುರಿಸಿದ್ದೇನೆ. ಮೂರರಲ್ಲಿ ಸೋತಿದಿನಿ, ಮೂರರಲ್ಲಿ ಗೆಲುವು ಸಾಧಿಸಿದ್ದೇನೆ. ಹೀಗಾಗಿ ನಿಮ್ಮನ್ನು ಸೋಲಿಸಲು ಸಿದ್ದರಾಮಯ್ಯ ಬೇಡ ನಾನೇ ಸಾಕು" ಎಂದಿದ್ದಾರೆ.












Click it and Unblock the Notifications