ಶಿರಾ ಚುನಾವಣೆ; ಪ್ರಚಾರದಿಂದ ಸಚಿವ ಮಾಧುಸ್ವಾಮಿ ದೂರ!
ತುಮಕೂರು, ನವೆಂಬರ್ 01: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದೆ. ವಿವಿಧ ಪಕ್ಷಗಳು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿವೆ. ಬಿಜೆಪಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದೆ.
ಬಿಜೆಪಿಯ ಪ್ರಚಾರ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಿರಾ ಪಕ್ಕದ ಚಿಕ್ಕನಾಯಕನಹಳ್ಳಿಯ ಬಿಜೆಪಿ ಶಾಸಕ ಜೆ. ಸಿ. ಮಾಧುಸ್ವಾಮಿ ಗೈರು ಹಲವರ ಕುತೂಹಲಕ್ಕೆ ಕಾರಣವಾಗಿದೆ. ಬಹಿರಂಗ ಪ್ರಚಾರ ಭಾನುವಾರ ಸಂಜೆ 6ಕ್ಕೆ ಅಂಂತ್ಯಗೊಳ್ಳಲಿದೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದಿಂದ ಜೆ. ಸಿ. ಮಾಧುಸ್ವಾಮಿ ಸಂಪೂರ್ಣವಾಗಿ ದೂರವಾಗಿದ್ದಾರೆ. ಶುಕ್ರವಾರ ವಿಜಯ ಸಂಕಲ್ಪ ಸಮಾವೇಶಕ್ಕಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಮಿಸಿದ್ದರು. ಈ ಸಮಾವೇಶಕ್ಕೆ ಸಹ ಮಾಧುಸ್ವಾಮಿ ಗೈರಾಗಿದ್ದರು.

ಬಿಜೆಪಿ ಶಿರಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯದ ವಿವಿಧ ಭಾಗದ ನಾಯಕರು, ಕಾರ್ಯಕರ್ತರು ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳು ಅಕ್ಕಪಕ್ಕದಲ್ಲಿವೆ. ಕ್ಷೇತ್ರದ ಚುನಾವಣಾ ಚಿತ್ರಣ ಜೆ. ಸಿ. ಮಾಧುಸ್ವಾಮಿ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಅವರು ಪ್ರಚಾರದಲ್ಲಿ ಏಕೆ ಪಾಲ್ಗೊಂಡಿಲ್ಲ? ಎಂಬುದು ಪ್ರಶ್ನೆ.
ಪ್ರಚಾರ ಸಭೆಯಲ್ಲಿ ಜೆ. ಸಿ. ಮಾಧುಸ್ವಾಮಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರ ಟ್ವೀಟರ್ ಖಾತೆ, ಫೇಸ್ ಬುಕ್ ಪೇಜ್‌ನಲ್ಲಿ ಶಿರಾ ಉಪ ಚುನಾವಣೆ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ. ಇದನ್ನು ನೋಡಿದ ಪ್ರತಿಪಕ್ಷಗಳು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಆರೋಪಿಸುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ. ವೈ. ವಿಜಯೇಂದ್ರ ಅವರು ಕೋವಿಡ್‌ನಿಂದ ಮಾಧುಸ್ವಾಮಿ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮಾಧುಸ್ವಾಮಿ ಅವರು ಯಾವುದೇ ಹೇಳಿಕೆ ನೀಡಿಲ್ಲ.
ಶಿರಾದಲ್ಲಿ ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಮತ್ತು ಜೆಡಿಎಸ್‌ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳು. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.












Click it and Unblock the Notifications