ಐಎಂಎ ಹಗರಣದ ಆರೋಪಿ ಮಾಜಿ ಕೆಎಎಸ್ ಅಧಿಕಾರಿ ಎಲ್‌ಸಿ ನಾಗರಾಜ್ ಮಧುಗಿರಿಯ ಬಿಜೆಪಿ ಅಭ್ಯರ್ಥಿ!
ತುಮಕೂರು, ಏಪ್ರಿಲ್ 12: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಕೆಲವರ ಹೆಸರು ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ತುಮಕೂರು ಜಿಲ್ಲೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜ್.
ಎಸ್....ಬಹುಕೋಟಿ ಐ ಮಾನಿಟರಿ ಅಡ್ವೈಸರಿ (ಐಎಂಎ) ಪೊಂಜಿ ಹಗರಣದ ಆರೋಪಿ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಎಲ್‌ಸಿ ನಾಗರಾಜ್‌ಗೆ ಬಿಜೆಪಿ ಮಣೆ ಹಾಕಿದ್ದು, ಮಧುಗಿರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕರ್ನಾಟಕದಲ್ಲಿ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ನಾಗರಾಜ್ ಹೆಸರು ಕೇಳಿ ಬಂದಿತ್ತು. ಐಎಂಎಎ ಪರವಾಗಿ ವರದಿ ನೀಡಲು 4.5 ಕೋಟಿ ರೂ. ಲಂಚ ಸ್ವೀಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಿಜೆಪಿ ಸರ್ಕಾರವು ಅವರ ರಾಜೀನಾಮೆಯನ್ನು ಅಂಗೀಕರಿಸಿಸಿತ್ತು. ಬಳಿಕ ಅವರು ಬಿಜೆಪಿ ಸೇರುವ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಇದಾದ ಬಳಿಕ ಈಗ ಆಡಳಿತ ಪಕ್ಷವು ಅವರನ್ನು ಮಧುಗಿರಿಯ ಅಭ್ಯರ್ಥಿ ಎಂದು ಘೋಷಿಸಿದೆ. ಇದಕ್ಕೆ ಹಲವು ಟೀಕೆಗಳು ವ್ಯಕ್ತವಾಗಿವೆ. ಈಗಾಗಲೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ಪ್ರತಿಕ್ಷಗಳು ಟೀಕೆ ಮಾಡುತ್ತಿದ್ದು, ಇದು ಮತ್ತಷ್ಟು ಕಾರಣಗಳನ್ನು ಒದಗಿಸಿದೆ.
ಐ ಮಾನಿಟರಿ ಅಡ್ವೈಸರಿ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದ್ದಕ್ಕಾಗಿ ಅಂದಿನ ಬೆಂಗಳೂರು ಉತ್ತರ ಸಹಾಯಕ ಆಯುಕ್ತ ನಾಗರಾಜ್ ಅವರನ್ನು ಜುಲೈ 2019 ರಲ್ಲಿ ಬಂಧಿಸಲಾಗಿತ್ತು. ಅವರ ಉಮೇದುವಾರಿಕೆಯನ್ನು ಬಸವರಾಜ ಬೊಮ್ಮಾಯಿ ಸಂಪುಟದ ಬಿಜೆಪಿ ಸಚಿವರೊಬ್ಬರು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಐಎಂಎ ಹಗರಣದ ತನಿಖೆ ನಡೆಸುತ್ತಿದ್ದಾಗ ಎಲ್. ಸಿ. ನಾಗರಾಜ್ ಬಂಧನವೂ ಆಗಿತ್ತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. ಅಮಾನತ್ತಿನಲ್ಲಿದ್ದ ಅವರು ವೈಯಕ್ತಿಕ ಕಾರಣದಿಂದ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಮಾರ್ಚ್ 9ರಂದು ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ಸರ್ಕಾರ ರಾಜೀನಾಮೆಯನ್ನು ಅಂಗೀಕರಿಸಿತ್ತು. ಈಗ ಬಿಜೆಪಿಯಿಂದ ಮಧುಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

1998ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಐಎಂಎ ಪರವಾಗಿ ವರದಿ ನೀಡಲು ಮೂರು ಕಂತುಗಳಲ್ಲಿ 4.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ ಅವರನ್ನ ಬಂಧಿಸಲಾಗಿತ್ತು. ನೆಲಮಂಗಲದ ಪರಮಣ್ಣ ಬಡಾವಣೆಯಲ್ಲಿರುವ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಇನ್ನು, ನಾಗರಾಜ್ ಅವರನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿ ಎಸ್.ಗಿರೀಶ್ ಅವರ ಮಾವ ಕೆ.ಎನ್.ರಾಜಣ್ಣ ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಕುತೂಹಲ ಮೂಡಿಸಿದೆ. ನಾಗರಾಜ್ ಮತ್ತು ರಾಜಣ್ಣ ಇಬ್ಬರೂ ಪರಿಶಿಷ್ಟ ಪಂಗಡದ (ಎಸ್ಟಿ) ನಾಯಕ ಸಮುದಾಯದವರಾಗಿದ್ದು, ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಹಾಲಿ ಶಾಸಕ ಕುಂಚಟಿಗ ಒಕ್ಕಲಿಗ ಸಮುದಾಯದ ಎಂ.ವಿ.ವೀರಭದ್ರಯ್ಯರನ್ನು ಕಣಕ್ಕಿಳಿಸಿದೆ.
ಮಾಜಿ ಐಎಎಸ್ ಅಧಿಕಾರಿ ಬಿ.ಎಚ್ ಅನಿಲ್ ಕುಮಾರ್ ಅವರು ಕೊರಟಗೆರೆ (ಪರಿಶಿಷ್ಟ ಜಾತಿ ಮೀಸಲು) ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಡಾ. ಪರಮೇಶ್ವರ ವಿರುದ್ಧ ತೊಡೆತಟ್ಟಲಿದ್ದಾರೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದ ಪರಮೇಶ್ವರ ಅವರನ್ನು ಸೋಲಿಸಿದ್ದ ಮಾಜಿ ಶಾಸಕ ಪಿ ಸುಧಾಕರ್ ಲಾಲ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ.












Click it and Unblock the Notifications