ತಾಯಿ ಕೊಲೆಗಾರನನ್ನು ಪೊಲೀಸರಿಗೆ ಹಿಡಿದುಕೊಟ್ಟ ಮಗ
ತುಮಕೂರು, ಜು. 1 : ಹೆಂಡತಿಯನ್ನು ಕೊಲೆ ಮಾಡಿ ಅದು ಸಹಜ ಸಾವು ಎಂದು ಸುಳ್ಳು ಹೇಳಿದ್ದ ವ್ಯಕ್ತಿಯನ್ನು ಆತನ ಮಗನೇ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ಹೆಂಡತಿ ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಶಿರಾ ತಾಲೂಕಿನ ಮೆಹಬೂಬ್ ನಗರದ ಸುಖಾಬಾನು (23) ಸಾವನ್ನಪ್ಪಿದ್ದಳು. ಆದರೆ ಆಕೆಯ ಪತಿ ಫಯಾಜ್ ಇದು ಸಹಜ ಸಾವು, ರಂಜಾನ್ ಉಪವಾಸ ಮಾಡುತ್ತಿದ್ದ ಆಕೆ ಸಾವನ್ನಪ್ಪಿದ್ದಾಳೆ ಎಂದು ಎಲ್ಲರನ್ನು ನಂಬಿಸಿದ್ದ. ಆದರೆ, ತಾಯಿಯ ಸಾವಿನ ಸತ್ಯವನ್ನು ನಾಲ್ಕು ವರ್ಷದ ಹಸನಾನ್ ಬಿಚ್ಚಿಟ್ಟಿದ್ದಾನೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಫಯಾಜ್ ಸೋಮವಾರ ಮಧ್ಯಾಹ್ನ ಪತ್ನಿ ಸುಖಾಬಾನುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಹಸನಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೊಲೆಯ ರಹಸ್ಯ ಬಯಲಾಗಿದೆ. [ತಾಯಿಯ ಕೊಂದವನ ಪತ್ತೆ ಹಚ್ಚಿದ ಬಾಲಕಿ]
ಘಟನೆ ವಿವರ : ಐದು ವರ್ಷಗಳ ಹಿಂದೆ ಸುಖಾಬಾನು ಮತ್ತು ಫಯಾಜ್ ವಿವಾಹವಾಗಿದ್ದರು. ಸುಖಾಬಾನು ಮನೆಯವರು ಕಡು ಬಡತನದಲ್ಲಿದ್ದರು ಅಳಿಯನಿಗೆ ಆಟೋ ಕೊಡಿಸಿ, ಸಂಸಾರ ಸಾಗಿಸಲು ದಾರಿ ಮಾಡಿಕೊಟ್ಟಿದ್ದರು. ಕುಡಿತದ ದಾಸನಾಗಿದ್ದ ಫಯಾಜ್ ಹೆಂಡತಿಗೆ ಕಿರುಕುಳ ನೀಡುತ್ತಿದ್ದ.
ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರವೂ ಇಬ್ಬರ ನಡುವೆ ಜಗಳ ಉಂಟಾಗಿದೆ. ನಂತರ ಫಯಾಜ್ ಕತ್ತು ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ್ದ. ಇದನ್ನು ಮನೆಯಲ್ಲಿದ್ದ ಹಸನಾನ್ ನೋಡಿದ್ದ. ಆದರೆ, ಅಪ್ಪನ ಭಯದಿಂದಾಗಿ ಸುಮ್ಮನಿದ್ದ.
ಸುಖಾಬಾನು ಸಂಬಂಧಿಕರಿಗೆ ಇದೊಂದು ಸಹಜ ಸಾವು ಎಂದು ಫಯಾಜ್ ನಂಬಿಸಿದ್ದ. ಮನೆಗೆ ಪೊಲೀಸರು ಬಂದಾಗ ಧೈರ್ಯದಿಂದ ಹಸನಾನ್ ನಡೆದ ಘಟನೆಯನ್ನು ಪೊಲೀಸರಿಗೆ ಹೇಳಿದ್ದಾನೆ. ಅಪ್ಪನೇ ತಾಯಿಯನ್ನು ಕೊಲೆ ಮಾಡಿರುವುದ ಸತ್ಯವನ್ನು ತಿಳಿಸಿದ್ದಾನೆ. ಪೊಲೀಸರು ಫಯಾಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಬಯಲಾಗಿದೆ.












Click it and Unblock the Notifications