ಒಂದು ಸೋಲಿನಿಂದ ನೈತಿಕ ಬಲ ಕುಂದಿಲ್ಲ: ದೇವೇಗೌಡ
ತುಮಕೂರು, ಅಕ್ಟೋಬರ್ 3: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದು ಖಚಿತ. ಕಾರ್ಯಕರ್ತರು ಅದಕ್ಕೆ ತಯಾರಾಗಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ತುಮಕೂರಿಗೆ ಮೊದಲ ಬಾರಿಗೆ ಆಗಮಿಸಿದ ದೇವೇಗೌಡ ಅವರು ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದರು.
'ನಾನು 15 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಸೋಲು ಮತ್ತು ಗೆಲುವು ರಾಜಕಾರಣದಲ್ಲಿ ಸಾಮಾನ್ಯ. ಒಂದು ಸೋಲಿಗೆ ಅಂಜಬಾರದು. ನಾವು ಸೋಲನ್ನು ಸ್ಪೂರ್ತಿಯಾಗಿ ಸ್ವೀಕಾರ ಮಾಡಬೇಕು' ಎಂದು ಅವರು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.
'ಚುನಾವಣೆಯಲ್ಲಿ ಫಲಿತಾಂಶ ನನ್ನ ಪರವಾಗಿ ಬಂದಿಲ್ಲ. ಆದರೂ 6.90 ಲಕ್ಷ ಮತಗಳನ್ನು ನೀಡಿದ್ದೀರಿ. ಅದಕ್ಕಾಗಿ ತುಮಕೂರಿನ ಜನತೆಗೆ ನಮಸ್ಕಾರ ಹೇಳುತ್ತೇನೆ' ಎಂದು ಹೇಳಿದರು.

ಸೋಲಿನಿಂದ ನೈತಿಕ ಬಲ ಕುಂದಿಲ್ಲ
'ಕೆಲವೊಂದು ಬಾರಿ ದೈವದ ಆಟವೂ ಇರುತ್ತದೆ. ನಾನು ತುಮಕೂರಿನಿಂದ ಲೋಕಸಭೆ ಚುನಾವಣೆಗೆ ನಿಲ್ಲುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ಮತ ಹಾಕಿದ ಜನತೆಗೆ ಅನಂತ ಧನ್ಯವಾದಗಳನ್ನು ಹೇಳುತ್ತೇನೆ. ಎರಡು ತಿಂಗಳ ಬಳಿಕ ನಿಮ್ಮನ್ನು ಭೇಟಿಯಾಗಲು ಬಂದಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಾನು ಈ ಸೋಲಿನಿಂದ ಕುಪಿತನಾಗಿಲ್ಲ. ಸೋತಿದ್ದರೂ ನನ್ನಲ್ಲಿನ ನೈತಿಕ ಬಲ ಕುಂದಿಲ್ಲ. ಹೋರಾಟವನ್ನು ಮುಂದುವರಿಸುತ್ತೇನೆ' ಎಂದರು.

ಯಡಿಯೂರಪ್ಪಗೆ ಪತ್ರ
'ಬಿಎಸ್ ಯಡಿಯೂರಪ್ಪ ಅವರು ಈಗ ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಆದರೆ ಅವರು ಬಡವರಿಗೆ ಮೋಸ ಮಾಡಬಾರದು. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಹಾಗೆಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಬಡವರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡುತ್ತೇನೆ' ಎಂದು ತಿಳಿಸಿದರು.

ಪ್ರತಿಭಟನೆ ನಡೆಸೋಣ
'ವೇಳಾಪಟ್ಟಿ ರಚಿಸಿಕೊಂಡು ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಜನರ ಕಷ್ಟ ಆಲಿಸಿ ಅದನ್ನು ಯಡಿಯೂರಪ್ಪ ಅವರ ಗಮನಕ್ಕೆ ತರುತ್ತೇನೆ. ಕೇಂದ್ರ ಸರ್ಕಾರದ ತಪ್ಪು ಕಾರ್ಯಕ್ರಮಗಳಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ರಾಜ್ಯದ ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ನೆರೆ ಪರಿಹಾರ ತರಲು ರಾಜ್ಯ ಸರ್ಕಾರ ವಿಫಲವಾಗಿದೆ. ಅ. 10ರಿಂದ ಅಧಿವೇಶನ ಆರಂಭವಾಗುವ ಮೊದಲ ದಿನ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಮೇಲೆ ಒತ್ತಡ ಹಾಕೋಣ' ಎಂದು ಕಾರ್ಯಕರ್ತರಿಗೆ ಹೇಳಿದರು.

ದೇವೇಗೌಡ, ಖರ್ಗೆ ಇಲ್ಲದೆ ಅನಾಥ
'ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ದಿನವೂ ಯುಗಾದಿ, ದೀಪಾವಳಿಯಂತೆ ಇರುತ್ತದೆ, ಅಭಿವೃದ್ಧಿ ವೇಗೆ ಹೆಚ್ಚುತ್ತದೆ ಎಂದೆಲ್ಲ ಭಾಷಣ ಬಿಗಿದವರು ರಾಜ್ಯಕ್ಕೆ ಎರಡು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಹಸಿವಿದ್ದಾಗಲೇ ಊಟ ನೀಡಬೇಕು. ಆದರೆ ಪ್ರವಾಹ ಸಂತ್ರಸ್ತರಿಗೆ ಅನ್ನ, ಆಶ್ರಯ ಕೊಡುವ ಬದಲು ಸಬೂಬು ಹೇಳುತ್ತಿದ್ದಾರೆ. ದೇವೇಗೌಡರು ಲೋಕಸಭೆಯಲ್ಲಿ ಇದ್ದಿದ್ದರೆ ಮೋದಿಗೆ ಕರ್ನಾಟಕ ನೆನಪಾಗುತ್ತಿತ್ತು. ದೇವೇಗೌಡರು ಮತ್ತು ಖರ್ಗೆ ಅವರನ್ನು ಸೋಲಿಸಿ ರಾಜ್ಯ ನಿಜಕ್ಕೂ ಅನಾಥವಾಗಿದೆ. ರಾಜ್ಯದ ಜನರ ಸಂಕಷ್ಟದ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವ ಒಬ್ಬ ನಾಯಕರೂ ಇಲ್ಲ. ಪ್ರತಾಪ್ ಸಿಂಹರಂತಹ ಅಪ್ರಬುದ್ಧರು ಉದ್ಧಟತನದ ಹೇಳಿಕೆ ನೀಡಿಕೊಂಡು ಸುತ್ತಾಡುತ್ತಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಟೀಕಿಸಿದರು.












Click it and Unblock the Notifications