ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಸಂಸದ ಬಸವರಾಜ್!
ತುಮಕೂರು, ಜ.12 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಅವರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ಅವರು ಬಿಜೆಪಿ ಸೇರುವುದಕ್ಕೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು, ಇದರಿಂದ ಅವರ ಕಾಂಗ್ರೆಸ್ ಕೈ ಹಿಡಿಯಲು ಸಜ್ಜಾಗಿದ್ದಾರೆ.
ತುಮಕೂರಿನಲ್ಲಿ ಭಾನುವಾರ ಮಾತನಾಡಿದ ಸಂಸದ ಬಸವರಾಜ್, ಸದ್ಯದಲ್ಲೇ ನಾನು ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಅವಕಾಶ ನೀಡುತ್ತದೆಯೋ ಎಂದು ತಿಳಿದಿಲ್ಲ. ಆದರೆ, ಟಿಕೆಟ್ ನೀಡದಿದ್ದರೂ ಪಕ್ಷ ಸೇರುವುದು ಖಚಿತ ಎಂದು ಅವರು ಹೇಳಿದರು. [ಬಸವರಾಜ್ ಸ್ಥಿತಿ ಅತಂತ್ರ]

ತುಮಕೂರು ಸಂಸದ ಜಿ.ಎಸ್.ಬಸವರಾಜ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡಿದ್ದರು. ಬಿಜೆಪಿ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಅವರು ಬಿಜೆಪಿ ಸೇರುವುದಕ್ಕೆ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಅವರು ಬಿಜೆಪಿಗೆ ಸೇರ್ಪಡೆಯಾಗಿರಲಿಲ್ಲ. [ಬಿಜೆಪಿ ಸೇರಿದ ಬಿ.ಎಸ್.ಯಡಿಯೂರಪ್ಪ]
ಬಸವರಾಜ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಲೋಕ ಸಭೆಯಲ್ಲಿ ಯಾವುದಾದರೂ ವಿಷಯದ ಕುರಿತು ಚರ್ಚೆ ನಡೆಯುವ ವೇಳೆ ಮಾತನಾಡಲು ಮುಂದಾಗುವ ಕರ್ನಾಟಕದ ಸಂಸದರಿಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವಕಾಶ ನೀಡುವುದಿಲ್ಲ ಎಂದು ಆರೋಪ ಮಾಡಿದ್ದರು.
ಇದು ರಾಜ್ಯದ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಬಸವರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಗುರುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಅಭಿಪ್ರಾಯಪಟ್ಟಿದ್ದರು. ಈ ಬೆಳವಣಿಗೆಗಳಿಂದ ಬಿಜೆಪಿಗೆ ಮರಳುವ ನಿರ್ಧಾರ ಕೈ ಬಿಟ್ಟಿರುವ ಸಂಸದ ಬಸವರಾಜ್ ಕಾಂಗ್ರೆಸ್ ಸೇರಲು ಸಿದ್ಧತೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಅನುಮಾನ : ಸಂಸದ ಜಿ.ಎಸ್.ಬಸವರಾಜ್ ಕಾಂಗ್ರೆಸ್ ಪಕ್ಷ ಸೇರಿದರೂ ತುಮಕೂರು ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡುವುದು ಅನುಮಾನ ಎಂಬ ಮಾತುಕಗಳು ಕೇಳಿಬರುತ್ತಿವೆ. ಆದರೆ, ಲೋಕಸಭೆ ಚುನಾವಣೆ ಟಿಕೆಟ್ ನೀಡದಿದ್ದರೂ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಬಸವರಾಜ್ ಹೇಳಿದ್ದಾರೆ. ಇದರಿಂದ ಯಡಿಯೂರಪ್ಪ ಅವರ ಪರಮಾಪ್ತರೊಬ್ಬರು ಅವರಿಂದ ದೂರವಾದಂತಾಗಿದೆ.












Click it and Unblock the Notifications