ಕಲ್ಲಿನಿಂದ ಹಲ್ಲೆ: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದೇನು?
ತುಮಕೂರು, ಏಪ್ರಿಲ್ 29: ಕೊರಟಗೆರೆ ವಿಧಾನಸಭಾ ಕ್ಷೇತ್ರದ ನರಸಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ತಮ್ಮ ಮೇಲೆ ಕಲ್ಲಿನಿಂದ ಆದ ದಾಳಿ ಬಗ್ಗೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆಯಲ್ಲಿ, ಯಾವ ಉದ್ದೇಶಕ್ಕಾಗಿ ದಾಳಿ ಮಾಡಿದ್ದಾರೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಯಾರೋ ದುಷ್ಕರ್ಮಿಗಳು ನನಗೆ ಕಲ್ಲಿನಿಂದ ಹೊಡೆದಿರಬಹುದು, ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ಗೊತ್ತಿಲ್ಲ. 35 ವರ್ಷದ ನನ್ನ ರಾಜಕೀಯ ಜೀವನದಲ್ಲಿ ನನಗೆ ಯಾರೂ ಶತ್ರುಗಳು ಇಲ್ಲ ಎಂದು ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ಹೇಳುವುದು ಕಷ್ಟ. ನನಗೆ ಶತ್ರುಗಳು ತುಂಬಾ ಕಡಿಮೆ ಎಂದುಕೊಂಡಿದ್ದೇನೆ. ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಚುನಾವಣೆ ಎನ್ನುವುದು ಜನರ ತೀರ್ಪು, ಅದನ್ನು ಜನರಿಗೆ ಬಿಡಬೇಕು. ಜನರ ಬಳಿ ಹೋಗಿ ಮತ ಕೇಳುತ್ತೇವೆ, ಆಶ್ವಾಸನೆ ನೀಡುತ್ತೇವೆ, ಮಾಡಿರುವ ಕೆಲಸದ ಬಗ್ಗೆ ಹೇಳಿಕೊಳ್ಳುತ್ತೇವೆ, ಇಷ್ಟು ಬಿಟ್ಟರೆ ಬೇರೆ ಯಾವುದು ನಡೆಯಬಾರದು ಎಂದರು.
ಒಂದು ವೇಳೆ ನನ್ನ ಮೇಲೆ ದ್ವೇಷ ಇದ್ದರೆ ಈ ರೀತಿ ಸಾರ್ವಜನಿಕ ಜೀವನದಲ್ಲಿ ಅದನ್ನು ತೀರಿಸಿಕೊಳ್ಳಬಾರದು. ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ, ಇದು ಹೂವಿನಲ್ಲಿ ಬಂದಿರುವ ಕಲ್ಲು ಅಲ್ಲ, ಪೆಟ್ಟು ತಿಂದವನು ನನಗೆ ಗೊತ್ತಾಗುತ್ತದೆ. ಯಾರೋ ಬೇಕೆಂದೆ ಮಾಡಿದ್ದಾರೆ ಎನಿಸುತ್ತದೆ. ಈ ಘಟನೆ ಕುರಿತಂತೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಪರಮೇಶ್ವರ್ ಹೇಳಿದರು.
ಸದ್ಯ ಪರಮೇಶ್ವರ್ ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪರಮೇಶ್ವರ್ ಅವರಿಗೆ ದೊಡ್ಡ ಮಟ್ಟದ ಗಾಯವಾಗಿಲ್ಲ, ತಲೆಗೆ ಸಣ್ಣ ಗಾಯವಾಗದೆ, ಚಿಕಿತ್ಸೆ ನೀಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಖಂಡನೆ
ಪರಮೇಶ್ವರ್ ಮೇಲೆ ಹಲ್ಲೆ ನಡೆದಿರುವ ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ಭಾರಿ ಟೀಕೆ ಮಾಡಿದ್ದಾರೆ. ಬಿಜೆಪಿ ಮೇಲೆ ಕಿಡಿ ಕಾರಿರುವ ಕಾಂಗ್ರೆಸ್ ರಾಜ್ಯದಲ್ಲಿ ಆಗಲೇ ಗಲಭೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಇದು ಪರಮೇಶ್ವರ ಮಾಡ್ತಿರುವ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications