ಕಲ್ಪತರು ನಾಡು ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಮತ್ತಷ್ಟು ಏರಿಕೆ

Copra Price: ಕಲ್ಪತರು ನಾಡು ತುಮಕೂರು ಜಿಲ್ಲೆಯ ಪ್ರಸಿದ್ಧ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (APMC) ಉಂಡೆ ಕೊಬ್ಬರಿಯ ಬೆಲೆ ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಕೊಬ್ಬರಿ ಬೆಲೆ, ಇತ್ತೀಚಿನ ಹರಾಜಿನಲ್ಲಿ ಕ್ವಿಂಟಲ್‌ಗೆ ₹38,018 ತಲುಪುವ ಮೂಲಕ ತೆಂಗು ಬೆಳೆಗಾರರಲ್ಲಿ ಸಂತಸ ಹೆಚ್ಚಿಸಿದೆ.

ಏಪ್ರಿಲ್ ತಿಂಗಳ ಆರಂಭದಲ್ಲಿ ಸುಮಾರು ₹31,000 ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ, ಕೇವಲ ಹದಿನೈದು ದಿನಗಳಲ್ಲಿ ಭಾರಿ ಏರಿಕೆ ಕಂಡಿದೆ. ಮೊದಲು 32,000, ನಂತರ 36,000-38,000 ರೂಪಾಯಿವರೆಗೂ ಏರಿಕೆ ಕಾಣುತ್ತಾ ಹೋಯಿತು. ಪ್ರಸ್ತುತ ಇದೀಗ ಗರಿಷ್ಠ ಬೆಲೆ ₹38,018ಕ್ಕೆ ತಲುಪಿದ್ದು, ಸರಾಸರಿ ಬೆಲೆ ₹36,700 ಆಸುಪಾಸಿನಲ್ಲಿದೆ.

Copra Price Hit Record 38 018 in Tumakuru District s Tiptur APMC Likely to Cross 40 000 Soon

40,000 ರೂಪಾಯಿ ಗಡಿ ದಾಟುವ ಸಾಧ್ಯತೆ

ಮಾರುಕಟ್ಟೆಯಲ್ಲಿ ಕೊಬ್ಬರಿಯ ಪೂರೈಕೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ 40,000 ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ.
ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮತ್ತು ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಉಂಡೆ ಕೊಬ್ಬರಿಯ ದಾಸ್ತಾನು ಕಡಿಮೆ ಆಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಕಳೆದ ಹರಾಜು ಪ್ರಕ್ರಿಯೆಯಲ್ಲಿ ₹36,000 ಇದ್ದ ಬೆಲೆ, ದಿಢೀರನೆ ₹2,000ದಷ್ಟು ಜಿಗಿತ ಕಂಡಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಬೆಳೆಗಾರರು ತಾವು ದಾಸ್ತಾನು ಮಾಡಿದ್ದ ಕೊಬ್ಬರಿಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ದೀರ್ಘಕಾಲದ ನಂತರ ಕೊಬ್ಬರಿ ಬೆಲೆಯಲ್ಲಿ ದಾಖಲೆಯ ಏರಿಕೆ ಆಗುತ್ತಿರುವುದು ತೆಂಗು ಬೆಳೆಗಾರರಿಗೆ ಹೊಸ ಭರವಸೆ ಬಂದದಿದೆ.

ತಿಪಟೂರು ಕೊಬ್ಬರಿಗೆ ಬೇಡಿಕೆ ಹೆಚ್ಚು ಯಾಕೆ?

* ಮಾಹಿತಿ ಪ್ರಕಾರ, ತಿಪಟೂರು ಭಾಗದಲ್ಲಿ ಬೆಳೆಯುವ ತೆಂಗಿನಕಾಯಿಗಳು ನೈಸರ್ಗಿಕವಾಗಿ ಸಿಹಿಯಾಗಿರುತ್ತವೆ. ಈ ಮಣ್ಣಿನ ಗುಣಲಕ್ಷಣಗಳಿಂದಾಗಿ ಇಲ್ಲಿನ ಉಂಡೆ ಕೊಬ್ಬರಿಯು ಇತರ ಭಾಗಗಳ ಕೊಬ್ಬರಿಗಿಂತ ವಿಭಿನ್ನವಾದ ಮತ್ತು ಉತ್ತಮವಾದ ರುಚಿಯನ್ನು ಹೊಂದಿರುತ್ತದೆ.

* ತಿಪಟೂರು ಕೊಬ್ಬರಿಯಲ್ಲಿ ಎಣ್ಣೆಯ ಅಂಶ ಹೆಚ್ಚಿರುತ್ತದೆ. ಸಾಧಾರಣವಾಗಿ ಶೇಕಡ 65ರಿಂದ 70 ರಷ್ಟು ಗುಣಮಟ್ಟದ ಎಣ್ಣೆ ದೊರೆಯುವುದರಿಂದ, ಎಣ್ಣೆ ತೆಗೆಯುವ ಕಾರ್ಖಾನೆಗಳಿಗೆ ಇದು ಮೊದಲ ಆಯ್ಕೆಯಾಗಿದೆ.

* ಇಲ್ಲಿನ ಕೊಬ್ಬರಿಯು ನೋಡಲು ಬಿಳಿಯಾಗಿ, ಆಕರ್ಷಕವಾಗಿ ಮತ್ತು ಗಟ್ಟಿಯಾಗಿರುತ್ತದೆ. ಸರಿಯಾಗಿ ಒಣಗಿಸಿದ ಉಂಡೆ ಕೊಬ್ಬರಿಯು ದೀರ್ಘಕಾಲದವರೆಗೆ ಕೆಡದಂತೆ ಉಳಿಯುತ್ತದೆ. ಇದು ರಫ್ತು ಮಾಡಲು ಮತ್ತು ದಾಸ್ತಾನು ಇಡಲು ಸಹಕಾರಿಯಾಗಲಿದೆ.

* ರಾಜಸ್ಥಾನ್, ಗುಜರಾತ್, ದೆಹಲಿ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಸಿಹಿ ಪದಾರ್ಥಗಳ ತಯಾರಿಕೆಗೆ ಮತ್ತು ಮಸಾಲಾ ಪದಾರ್ಥಗಳಲ್ಲಿ ಬಳಸಲು ತಿಪಟೂರು ಕೊಬ್ಬರಿಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ವಿಶೇಷವಾಗಿ ಚಳಿಗಾಲ ಮತ್ತು ಹಬ್ಬಗಳ ಸಮಯದಲ್ಲಿ ಅಲ್ಲಿ ಈ ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

* ತಿಪಟೂರು ಮಾರುಕಟ್ಟೆಯು ಏಷ್ಯಾದಲ್ಲೇ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿನ ಉಂಡೆ ಕೊಬ್ಬರಿ ತನ್ನದೇ ಆದ ಬ್ರ್ಯಾಂಡ್ ಹೊಂದಿದ್ದು, ಇದಕ್ಕೆ ಭೌಗೋಳಿಕ ಸೂಚ್ಯಂಕ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ.

ಬೆಲೆ ಏರಿಕೆಗೆ ಕಾರಣ ಏನು?

ಪ್ರಸಕ್ತ ವರ್ಷ ತೆಂಗು ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಮಾರುಕಟ್ಟೆಗೆ ಬರುತ್ತಿದ್ದ ಕೊಬ್ಬರಿಯ ಪ್ರಮಾಣ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಸಾಮಾನ್ಯವಾಗಿ ತಿಪಟೂರು ಎಪಿಎಂಸಿಗೆ ದಿನಕ್ಕೆ 3,000 ಕ್ವಿಂಟಲ್‌ಗೂ ಹೆಚ್ಚು ಬರುತ್ತಿದ್ದ ಕೊಬ್ಬರಿ, ಈಗ ಕೇವಲ 1,500 - 1,600 ಕ್ವಿಂಟಲ್‌ಗೆ ಇಳಿದಿದೆ. ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ.

* ಕೊಬ್ಬರಿಗೆ ಹೆಚ್ಚು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮತ್ತು ತಕ್ಷಣದ ಹಣ ಕೈ ಸೇರುವುದರಿಂದ ರೈತರು ಕಾಯಿ ಒಣಗಿಸಿ ಕೊಬ್ಬರಿ ಮಾಡುವ ಬದಲು ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಇದು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿದೆ.

* ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ್, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಿಂದ ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಬಂದಿದೆ. ಇದು ಒಂದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

* ತುಂಬಾ ಜನ ಸಣ್ಣ ರೈತರು ಬೆಲೆ ಕಡಿಮೆ ಇದ್ದಾಗಲೇ ತಮ್ಮ ಬಳಿ ಇದ್ದ ಕೊಬ್ಬರಿಯನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಈಗ ದೊಡ್ಡ ವರ್ತಕರು ಮತ್ತು ಕೆಲವು ದೊಡ್ಡ ಬೆಳೆಗಾರರ ಬಳಿ ಮಾತ್ರ ದಾಸ್ತಾನು ಇರುವುದರಿಂದ, ಬೇಡಿಕೆಗೆ ತಕ್ಕಷ್ಟು ಕೊಬ್ಬರಿ ಸಿಗದೆ ಬೆಲೆ ಗಗನಕ್ಕೇರುತ್ತಿದೆ.

* ತಿಪಟೂರು ಉಂಡೆ ಕೊಬ್ಬರಿಯು ತನ್ನ ಗಾತ್ರ, ಬಣ್ಣ ಮತ್ತು ತೈಲದ ಅಂಶಕ್ಕೆ ಪ್ರಸಿದ್ಧವಾಗಿದೆ. ಈ ಗುಣಮಟ್ಟದ ಕೊಬ್ಬರಿಯನ್ನು ಎಷ್ಟು ಬೆಲೆ ಕೊಟ್ಟಾದರೂ ಖರೀದಿಸಲು ಸಿದ್ಧರಿರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿರುವುದು ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ ಹೇಳುವುದಾರೆ, ಬೆಲೆ ಹೀಗೆಯೇ ಮುಂದುವರಿದರೆ ಕ್ವಿಂಟಲ್‌ ಕೊಬ್ಬರಿಗೆ 40,000 ರೂಪಾಯಿ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಬೆಲೆ ಹೆಚ್ಚಾದರೂ ಮಾರಾಟ ಮಾಡಲು ರೈತರ ಬಳಿ ಸಾಕಷ್ಟು ದಾಸ್ತಾನು ಇಲ್ಲದಿರುವುದು ಒಂದು ವಿಷಾದದ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+