ಮತ್ತೆ ದಲಿತ ಸಿಎಂ ಕೂಗು: ತುಮಕೂರಿನಲ್ಲಿ ಜಿ ಪರಮೇಶ್ವರ ಬೆಂಬಲಿಗರ ಪ್ರತಿಭಟನೆ
ತುಮಕೂರು, ಮೇ. 16: ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಮಂಗಳವಾರ ಪ್ರತಿಭಟನೆ ನಡೆಸಿದರು. ಈಗಾಗಲೇ ರಾಜ್ಯದಲ್ಲಿ ಯಾರಾಗಲಿದ್ದಾರೆ ಮುಖ್ಯಮಂತ್ರಿ ಎಂಬ ವಿಷಯ ಭಾರೀ ಚರ್ಚೆಯಲ್ಲಿದ್ದು, ಮತ್ತೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸೋಮವಾರವೇ ಕೆಲವು ಬೆಂಬಲಿಗರ ಜೊತೆಗೆ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಡಿಕೆ ಶಿವಕುಮಾರ್ ಅನಾರೋಗ್ಯದ ನೆಪ ಹೇಳಿ ಮಂಗಳವಾಎ ದೆಹಲಿಗೆ ಭೇಟಿ ನೀಡಿದ್ದಾರೆ.

ಈಶ್ವರ್ ಕಂಡ್ರೆ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಕರ್ನಾಟಕದ ಮುಂದಿನ ಸಿಎಂ ಯಾರೆಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಪ್ರಕಟಿಸಿಲ್ಲ. ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಜಿ ಉಪಮುಖ್ಯಮಂತ್ರಿಯಾಗಿದ್ದ , ಕೊರಟಗೆರೆ ಶಾಸಕ ಜಿ ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಎಂದು ಈ ಹಿಂದೆಯೂ ಕೂಗು ಕೇಳಿ ಬಂದಿತ್ತು.
ಇನ್ನು, ದಲಿತ ಸಿಎಂ ಮಾಡಬೇಕು, ಜಿ ಪರಮೇಶ್ವರ ಅವರನ್ನು ಸಾಮಾಜಿಕ ನ್ಯಾಯತತ್ವ ಅನುಸರಿಸಿ ಸಿಎಂ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಪರಮೇಶ್ವರ ಅವರ ಬೆಂಬಲಿಗರು, ಅಖಿಲ ಕರ್ನಾಟ ಜಿ ಪರಮೇಶ್ವರ ಯುವ ಸೇನೆ, ಛಲವಾದಿ ಮಹಾಸಭಾ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆಸ ಸಿಪಿಎಲ್ ಸಭೆಯಲ್ಲಿಯೂ ಕೆಲವು ಎಸ್‌ಸಿ ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಶಾಸಕರು ಮುಖ್ಯಮಂತ್ರಿ ಎಸ್‌ಸಿ ಸಮುದಾಯದವರಾಗಿರಬೇಕು ಎಂದು ಬೇಡಿಕೆ ಇಟ್ಟಿದ್ದರು. "ಹೆಚ್ಚಿನ ಸಂಖ್ಯೆಯ ಶಾಸಕರು, ಸುಮಾರು 35, ಎಸ್‌ಸಿ ಮತ್ತು ಎಸ್‌ಟಿ ಶಾಸಕರು ದಲಿತ ಸಿಎಂ ಬೇಡಿಕೆಯನ್ನು ಇಟ್ಟಿದ್ದಾರೆ,. ಅವರನ್ನು ಸಿಎಂ ಮಾಡುವುದರಿಂದ ಕಾಂಗ್ರೆಸ್ ತನ್ನ ಹಿಂದಿನ ಎಸ್‌ಸಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನು ಮತ್ತಷ್ಟು ಪುನರುಜ್ಜೀವನಗೊಳಿಸಲು ಸಾಧ್ಯ ಎಂದು ಹಲವರು ಹೇಳಿದ್ದಾರೆ" ಎಂದು ಮೂಲವೊಂದು ಮಾಹಿತಿ ನೀಡಿತ್ತು.

ಇತ್ತ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರ ದೆಹಲಿಯ ಕಚೇರಿಗೆ ತೆರಳಿದ್ದಾರೆ. ವೀಕ್ಷಕರ ತಂಡವು ಎಲ್ಲಾ ನೂತನ ಶಾಸಕರನ್ನು ಭೇಟಿಯಾಗಿ ಭಾನುವಾರ ರಹಸ್ಯ ಮತದಾನವನ್ನು ನಡೆಸಿದೆ. ಅದರ ಫಲಿತಾಂಶಗಳನ್ನು ಪಕ್ಷದ ಅಧ್ಯಕ್ಷರಿಗೆ ನೀಡಲಾಗಿದ್ದು, ಅವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಪಕ್ಷ ಘೋಷಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications