ರೇಲಾ ಆಸ್ಪತ್ರೆ ವೈದ್ಯರಿಗೆ ದೇವರನ್ನು ತೋರಿಸುವೆ ಎಂದಿದ್ದ ಸಿದ್ದಗಂಗಾ ಶ್ರೀಗಳು
ತುಮಕೂರು, ಜ 22: ಶಿವೈಕ್ಯರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಯವರ ಅಂತಿಮ ವಿಧಿವಿಧಾನಗಳು ಮುಕ್ತಾಯಗೊಂಡಿದೆ. ಇದಕ್ಕೂ ಮುನ್ನ, ಮೂರನೇ ಮೆಟ್ಟಿಲಿನ ಮೇಲೆ ಲಿಂಗ ಶರೀರವನ್ನು ಕೂರಿಸಿ ರುದ್ರಾಭಿಷೇಕ ಮಾಡಲಾಗಿತ್ತು.
ಸಿದ್ದಗಂಗಾ ಶ್ರೀಗಳ ಜೊತೆ ಸುಮಾರು ಎರಡು ದಶಕಗಳ ಕಾಲ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಮಹದೇವಸ್ವಾಮಿ, ಶ್ರೀಗಳ ಜೊತೆಗಿನ ತನ್ನ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲಿ, ಚೆನ್ನೈನ ರೇಲಾ ಮೆಡಿಕಲ್ ಸೆಂಟರ್ ನಲ್ಲಿ ನಡೆದ ವಿದ್ಯಮಾನಗಳನ್ನು ವಿವರಿಸಿದ್ದಾರೆ.
ದಿನಕ್ಕೆ ಎರಡ್ಮೂರು ಬಾರಿ ತಪಾಸಣೆಗೆ ಬರುತ್ತಿದ್ದ ರೇಲಾ ಆಸ್ಪತ್ರೆಯ ಎಂಡಿ ಡಾ. ಮೊಹಮ್ಮದ್ ರೇಲಾ, ಶ್ರೀಗಳ ಜೊತೆ ಮಾತನಾಡುತ್ತಾ, ನೀವು ದೇವರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಶ್ರೀಗಳು ಹೌದು ಎಂದು ಹೇಳಿದ್ದಾರೆ. ದೇವರು ಎಲ್ಲಿದ್ದಾನೆ, ನಮಗೂ ತೋರಿಸಿ ಎಂದಾಗ, ಶ್ರೀಗಳು ಡಾ. ರೇಲಾ ಅವರನ್ನು ತಮ್ಮ ತುಮಕೂರಿನ ಮಠಕ್ಕೆ ಆಹ್ವಾನಿಸಿದ್ದಾರೆ. ಬನ್ನಿ, ಅಲ್ಲಿ ನಿಮಗೆ ದೇವರನ್ನು ತೋರಿಸುತ್ತೇನೆ ಎಂದಿದ್ದಾರೆ.
ಯಾರವರು ಎಂದು ರೇಲಾ ಮರುಪ್ರಶ್ನಿಸಿದಾಗ, ನಮ್ಮ ಮಠದಲ್ಲಿ ಓದುವ ಮಕ್ಕಳು ಎಂದಿದ್ದಾರೆ. ನಾನು ಇಷ್ಟಲಿಂಗ ಪೂಜೆ ಮಾಡುವುದು, ನಾನು ದುಡಿಯುವುದು ನನ್ನ ಮಕ್ಕಳ ಒಳಿತಿಗಾಗಿ ಎಂದು ಶ್ರೀಗಳು ವೈದ್ಯರ ಬಳಿ ಹೇಳಿದ್ದರು ಎಂದು ಚಾಲಕ ಮಹದೇವಸ್ವಾಮಿ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.












Click it and Unblock the Notifications