Lokayukta Raid: 3 ಲಕ್ಷ ಲಂಚಕ್ಕೆ ಬೇಡಿಕೆ: ಮನೆಯಲ್ಲೇ ಲಾಕ್ ಆದ ಮಹಿಳಾ ತಹಶೀಲ್ದಾರ್
ತುಮಕೂರು, ಮಾರ್ಚ್ 21: ಲಂಚ ಸ್ವೀಕರಿಸುವ ವೇಳೆ ತನ್ನ ಮನೆಯಲ್ಲೇ ಮಹಿಳಾ ತಹಶೀಲ್ದಾರ್ ಲೋಕಾಯಕ್ತರ ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದಿದೆ. ತಹಶೀಲ್ದಾರ್ ಗೀತಾ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ ಎಂದು ವರದಿಯಾಗಿದೆ.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ. ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮಹಿಳಾ ತಹಶೀಲ್ದಾರ್ ಗೀತಾ ಅವರನ್ನು ಲಂಚದ ಹಣ ಸಮೇತ ವಶಕ್ಕೆ ಪಡೆಯಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ರೈತರೊಬ್ಬರಿಗೆ ಸೇರಿದ 33 ಗುಂಟೆ ಜಮೀನನ್ನು ಭೂ ಪರಿವರ್ತನೆ ಮಾಡಿಕೊಡಲು ತಹಶೀಲ್ದಾರ್ ಗೀತಾ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಭೂ ಪರಿವರ್ತನೆ ಮಾಡಿಕೊಡಲು ಮೊದಲು ನಿನ್ನೆ (ಮಾರ್ಚ್ 20) ಬೆಳಗ್ಗೆ 20 ಸಾವಿರ ರೂಪಾಯಿ ಪಡೆದಿದ್ದು, ಸಂಜೆ ಮತ್ತೆ 30 ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾರೆ. ಸಂಜೆ ಕಚೇರಿ ಇಲ್ಲದ ಕಾರಣ ಮನೆಗೆ ಬಂದು ಲಂಚದ ಹಣ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.
ರೈತನಿಂದ ಬರೋಬ್ಬರಿ 3 ಲಕ್ಷ ರೂಪಾಯಿ ಲಂಚಕೆ ಬೇಡಿ ಇಟ್ಟಿರುವುದು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿದು ಬಂದಿದ್ದು, ತಹಶೀಲ್ದಾರ್ ರೈತನನ್ನು ಮನೆಗೆ ಕರೆಸಿಕೊಂಡು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಡಿವೈಎಸ್ ಪಿ. ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಸದ್ಯ ಲಂಚ ಹಣದ ಸಮೇತ ಮಹಿಳಾ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಲಂಚ ಸ್ವೀಕರಿಸುವ ವೇಳೆಯೇ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಾರ್ಚ್ 12 ರಂದು ತುಮಕೂರಿನಲ್ಲಿ ನಡೆದಿತ್ತು.ತುಮಕೂರಿನ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ವಿ.ಕೆ, ಜಿಎಸ್‌ಟಿ ಹಣ ಕಡಿತಗೊಳಿಸಲು ವ್ಯಕ್ತಿಯೊಬ್ಬರ ಬಳಿ ಬರೋಬ್ಬರಿ 50 ಸಾವಿರ ಲಂಚಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಇಂದು (ಮಾರ್ಚ್ 12) ಮಂಗಳವಾರ ತುಮಕೂರಿನ ಕಚೇರಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಮಂಜುನಾಥ್ ವಿ.ಕೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಅಧಿಕಾರಿ 40 ಸಾವಿರ ಹಣ ತೆಗೆದುಕೊಳ್ಳುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿತ್ತು.












Click it and Unblock the Notifications