ಯುವಜನತೆಗೆ ಮಾದರಿ: ಆಂಬುಲೆನ್ಸ್‌ನಲ್ಲೇ ಬಂದ ಮತ ಚಲಾಯಿಸಿದ ಹಾಸಿಗೆ ಹಿಡಿದಿದ್ದ ರೋಗಿ
ತುಮಕೂರು, ಮೇ.01: ಪ್ರಜಾಪ್ರಭುತ್ವದ ಹಬ್ಬ ಇಂದು ಮುಗಿಯುತ್ತಿದ್ದು, ಹಲವು ಅಪರೂಪದ ಅಂಶಗಳಿಗೆ ಈ ದಿನ ಸಾಕ್ಷಿಯಾಗಿದೆ. ಮತದಾರರಲ್ಲಿ ಮದುಮಕ್ಕಳು, ವೃದ್ದರು, ಹಾಸಿಗೆ ಹಿಡಿದವರು, ಬಾಣಂತಿ, ಗರ್ಭಿಣಿಯರು ಕಾಣಿಸಿಕೊಂಡಿದ್ದಾರೆ. ತಮ್ಮ ಆರೋಗ್ಯ ಸ್ಥಿತಿ ಹೇಗೆ ಇದ್ದರೂ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ.
ಹಾಗೆಯೇ ಕಲ್ಪತರು ನಾಡು ತುಮಕೂರಿನಲ್ಲಿ ಗಂಭೀರ ಸ್ವರೂಪದ ಅಪಘಾತದಿಮದ ಹಾಸಿಗೆ ಹಿಡಿದಿರುವ ವ್ಯಕ್ತಿಯೊಬ್ಬರು ಆಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇದು ಇತರ ಮತದಾರರಿಗೂ ಮಾದರಿ ನಡೆಯಾಗಿದೆ.

ತುಮಕೂರು ನಗರದ ಸಂಪಗಿರಾಮು ಎಂಬ ವ್ಯಕ್ತಿಯೇ ಹಾಸಿಗೆಯಲ್ಲಿದ್ದರು ಮತ ಚಲಾಯಿಸಿದ ಪ್ರಜ್ಞಾವಂತ ಮಾತದಾರ. ಸಂಪಗಿರಾಮು ಅವರಿಗೆ ಅಫಘಾತವಾಗಿ ಗಂಭೀರ ಗಾಯದ ಪರಿಣಾಮ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲಿಯೇ ಇದ್ದಾರೆ. ಆದರೆ, ಚುನಾವಣೆಯ ದಿನ ತಮ್ಮ ಪತ್ನಿ ಜೊತೆ ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಸಂಪಗಿರಾಮು ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದ್ದಾರೆ. ಹಾಸಿಗೆ ಹಿಡಿದಿದ್ದರೂ ಕೂಡ ಮತದಾನ ಮಾಡಬೇಕ್ಕೆನ್ನುವ ಅವರ ಉತ್ಸಾಹಕ್ಕೆ ಚುನಾವಣಾ ಸಿಬ್ಬಂದಿ ಸಾಥ್ ನೀಡಿದ್ದಾರೆ. ಚುನಾವಣಾ ಸಿಬ್ಬಂದಿ ಸಹಾಯದಿಂದ ಸಂಪಗಿರಾಮು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರೂ ಮತ ಚಲಾಯಿಸಬೇಕು ಎನ್ನುವ ಇವರ ಮಾತುಗಳು ಇತರರಿಗೂ ಮಾದರಿ.
ಇನ್ನು, ಮಣಿಪಾಲ್ ಆಸ್ಪತ್ರೆ ಕೂಡ ತಮ್ಮ ಆಸ್ಪತ್ರೆಗಳಲ್ಲಿ ದಾಖಲಾಗಿರುವ ವೈದ್ಯರು ಶಿಫಾರಸು ಮಾಡಿರುವ 16 ರೋಗಿಗಳಿಗೆ ಮತದಾನ ಮಾಡಲು ನೆರವು ನೀಡಿದೆ. ಮುಖ್ಯ ಚುನಾವಣಾ ಅಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಿ ಈ ಒಳರೋಗಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿ ಈ ಕೆಲಸವನ್ನು ಮಾಡಿವೆ. ಆಸ್ಪತ್ರೆಗಳಲ್ಲಿ ತಮ್ಮ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಅನುಮೋದನೆಯ ನಂತರ, ರೋಗಿಗಳನ್ನು ನೋಂದಾಯಿತ ವಾಹನಗಳಲ್ಲಿ ಮತ ಚಲಾಯಿಸಲು ಮತಗಟ್ಟೆಗಳಿಗೆ ಕರೆದುಕೊಮಡು ಹೋಗಿ ಮತದಾನ ಮಾಡಿಸಿದ್ದಾರೆ.

ಈ 16 ರೋಗಿಗಳಲ್ಲಿ ಡಯಾಲಿಸಿಸ್‌ನಲ್ಲಿರುವ ರೋಗಿಗಳು, ಅಪಘಾತದಿಮದ ಚೇತರಿಸಿಕೊಳ್ಳುವವರು, ಕೀಮೋಥೆರಪಿಯಲ್ಲಿರುವ ರೋಗಿಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಸೇರಿದ್ದರು. ಯಾವುದೇ ಅನಗತ್ಯ ಅವಘಡಗಳನ್ನು ತಪ್ಪಿಸಲು ಆಸ್ಪತ್ರೆಯು ಎಲ್ಲಾ 16 ರೋಗಿಗಳಿಗೆ ವೈದ್ಯಕೀಯ ಮತ್ತು ಸಾರಿಗೆ ನೆರವು ನೀಡಿತ್ತು.












Click it and Unblock the Notifications