ಆಸ್ಪತ್ರೆಗೆ ಹೋಗುವಾಗ ಅಪಘಾತ: ಮೂವರು ಸಜೀವ ದಹನ
ತುಮಕೂರು, ಜನವರಿ 4: ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಜೀವ ದಹನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ವಸಂತಕುಮಾರ್ (55), ರಾಮಯ್ಯ(55) ಹಾಗೂ ನರಸಮ್ಮ (65) ಎಂಬವರು ಸಜೀವ ದಹನವಾಗಿದ್ದಾರೆ. ಮೃತರು ಗುಬ್ಬಿ ತಾಲೂಕಿನ ಎನ್. ಹೊಸಳ್ಳಿ ಗ್ರಾಮದವರು.
ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಎಂಬವರನ್ನು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅಪಘಾತದ ತೀವ್ರತೆಗೆ ಕಾರು ಹಾಗೂ ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬಸ್‌ಗೂ ಕೂಡ ಬೆಂಕಿ ಆವರಿಸಿಕೊಂಡಿದ್ದು, ಬಸ್ ಸುಟ್ಟು ಕಲಕಲಾಗಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶ್ರೀಶ ಟ್ರಾವೆಲ್ಸ್ ಗೆ ಸೇರಿದ ಬಸ್ ಹಾಗೂ ಎನ್ ಹೊಸಹಳ್ಳಿ ಗ್ರಾಮದಿಂದ ನಿಟ್ಟೂರಿಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದರು. ಡಿಕ್ಕಿ ರಭಸಕ್ಕೆ ಮೂವರು ಹೊರಗೆ ಬಿದ್ದರೆ, ಮತ್ತೆ ಮೂವರು ಸಜೀವ ದಹನವಾಗಿದ್ದಾರೆ.












Click it and Unblock the Notifications