ತುಮಕೂರು: ಹೃದಯಾಘಾತದಿಂದ ಹತ್ತನೇ ತರಗತಿ ವಿದ್ಯಾರ್ಥಿ ಸಾವು
ತುಮಕೂರು, ಫೆಬ್ರವರಿ 22: ಇತ್ತೀಚಿಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಆರೋಗ್ಯವಂತ ಮಕ್ಕಳು ಏಕಾಏಕಿ ಎದೆ ನೋವು ಕಾಣಿಸಿಕೊಂಡು ಕೊನೆಯುಸಿರೆಳೆಯುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಇದೀಗ ಕರ್ನಾಟಕದಲ್ಲಿ ಮತ್ತೋರ್ವ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಹತ್ತನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ. ಭೈರಾಪುರ ಗ್ರಾಮದ ಜಯರಾಂ ಅವರ ಪುತ್ರ ರಾಹುಲ್ (16) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಜಿಎಚ್ಎಸ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ರಾಹುಲ್ ನಿನ್ನೆ (ಫೆಬ್ರವರಿ 22) ಶುಕ್ರವಾರ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ಮನೆಯಲ್ಲೇ ಮಗಲಗಿದ್ದ ರಾಹುಲ್‌ಗೆ ರಾತ್ರಿ 9:30ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ಹುಳಿಯಾರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ರಾಹುಲ್ ಹುಳಿಯಾರಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಣ್ಣೇದುರೇ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ತೆಲಂಗಾಣ: ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ಇನ್ನು ಫೆಬ್ರವರಿ 21 ಗುರುವಾರ ತೆಲಂಗಾಣದಲ್ಲಿಯೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿ ಎದೆ ನೋವಿನಿಂದ ಕುಸಿದು ಬಿದ್ದ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಶ್ರೀನಿಧಿ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಶ್ರೀನಿಧಿ ಶಾಲೆಗೆ ತೆರಳುವಾಗ ಏಕಾಏಕಿ ಎದೆ ನೋವು ಎಂದು ಕುಸಿದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಶಿಕ್ಷಕಿಯೊಬ್ಬರು ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಶ್ರೀನಿಧಿಯನ್ನು ಪರೀಕ್ಷಿಸಿದ ವೈದ್ಯರು ಸಿಪಿಆರ್ ಸೇರಿದಂತೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಆದರೆ, ಆಕೆ ಸ್ಪಂದಿಸದೇ ಇದ್ದಾಗ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಅದಾಗಲೇ ಶ್ರೀನಿಧಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.












Click it and Unblock the Notifications