100 ಕೋಟಿ ರೂ. ಹೆಲಿಕಾಪ್ಟರ್‌ಗೆ ಗುರುವಾಯೂರಿನಲ್ಲಿ ಪೂಜೆ: ಹೇಗಿದೆ ಐಷಾರಾಮಿ ಹೆಲಿಕಾಪ್ಟರ್?
ಗುರುವಾಯೂರು, ಮಾರ್ಚ್ 25: ಭಾರತದ ಉದ್ಯಮಿ ಹಾಗೂ ಆರ್‌ಪಿ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಬಿ.ರವಿ ಪಿಳ್ಳೈ ಖರೀದಿ ಮಾಡಿದ ಏರ್‌ಬಸ್ ಎಚ್ 145 ಐಷಾರಾಮಿ ಹೆಲಿಕಾಪ್ಟರ್‌ಗೆ ಗುರುವಾಯೂರು ದೇವಾಲಯದಲ್ಲಿ ವಾಹನ ಪೂಜೆ ಮಾಡಲಾಗಿದೆ. ಈ ಪೂಜೆಯನ್ನು ಕೂಡಾ ವಿಶೇಷವಾಗಿ ನಡೆಸಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಬಿ.ರವಿ ಪಿಳ್ಳೈ ಏರ್‌ಬಸ್ ಎಚ್ 145 ಹೆಲಿಕಾಪ್ಟರ್ ಅನ್ನು ಖರೀದಿಸಿದ ದೇಶದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರಿಯನೂರು ಶ್ರೀ ಕೃಷ್ಣ ಕಾಲೇಜಿನ ಮೈದಾನದಲ್ಲಿ ಈ ಐಷಾರಾಮಿ ನೂರು ಕೋಟಿ ರೂಪಾಯಿ ಹೆಲಿಕಾಪ್ಟರ್ ಮಧ್ಯಾಹ್ನ ಸುಮಾರು 3 ಗಂಟೆಗೆ ಲ್ಯಾಂಡ್ ಆಗಿದೆ. ಈ ಹೆಲಿಕಾಪ್ಟರ್ ಅನ್ನು ಗುರುವಾಯೂರು ದೇವಾಲಯಕ್ಕೆ ಮುಖ ಮಾಡಿ ಇರಿಸಲಾಗಿದ್ದು, ಸುತ್ತಲೂ ದೀಪಗಳನ್ನು ಬೆಳಗಲಾಗಿತ್ತು. ಆ ಬಳಿಕ ಅರ್ಚಕ ಸುಮೇಶ್ ನಂಬೂದರಿ ಹೆಲಿಕಾಪ್ಟರ್‌ಗೆ ಪೂಜೆ ಸಲ್ಲಿಸಿದ್ದಾರೆ.
ಈ ನೂರು ಕೋಟಿ ರೂಪಾಯಿ ಹೆಲಿಕಾಪ್ಟರ್ ಪೂಜೆಯ ವೇಳೆ ಆರ್‌ಪಿ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಬಿ.ರವಿ ಪಿಳ್ಳೈ, ಅವರ ಪುತ್ರ ಗಣೇಶ್ ರವಿ ಪಿಳ್ಳೈ, ಪೈಲೆಟ್ ಕ್ಯಾಪ್ಟನ್ ಸುನೀಲ್ ಕಾನ್ನೋತ್, ಕ್ಯಾಪ್ಟನ್ ಜಿಜಿ ಕುಮಾರ್ ಕೂಡಾ ಉಪಸ್ಥಿತರಿದ್ದರು. ಈ ಐಷಾರಾಮಿ ಹೆಲಿಕಾಪ್ಟರ್ ಅನ್ನು ಖರೀದಿ ಮಾಡಿದ ಬಳಿಕ ಮೊದಲ ಬಾರಿಗೆ ರವಿ ಪಿಳ್ಳೈ ಗುರುವಾಯೂರು ದೇವಾಲಯಕ್ಕೆ ಆಗಮಿಸಿದ್ದಾರೆ. ಹಾಗಾದರೆ ಈ ಐಷಾರಾಮಿ ಹೆಲಿಕಾಪ್ಟರ್‌ನಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂದು ತಿಳಿಯೋಣ ಮುಂದೆ ಓದಿ....

ಮೂರು ಹೆಲಿಪ್ಯಾಡ್‌ಗಳು ಹೊಂದಿದೆ ಆರ್‌ಪಿ ಗ್ರೂಪ್
68 ವರ್ಷದ ಈ ಬಿಲಿಯನೇರ್ ಪ್ರಸ್ತುತ 2.5 ಶತಕೋಟಿ ರೂ. ಮೌಲ್ಯವನ್ನು ಹೊಂದಿದ್ದಾರೆ. ಬಿ.ರವಿ ಪಿಳ್ಳೈ ಒಡೆತನದಲ್ಲಿರುವ ವಿವಿಧ ಕಂಪನಿಯಲ್ಲಿ ಸುಮಾರು 70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರವಿ ಪಿಳ್ಳೈ ತಮ್ಮ ಉದ್ಯಮವನ್ನು ಯುಎಇ ಮತ್ತು ಎಲ್ಲಾ ಮಧ್ಯಪ್ರಾಚ್ಯ ದೇಶಗಳಲ್ಲಿ ಕೂಡಾ ವಿಸ್ತರಣೆ ಮಾಡಿಕೊಂಡಿದ್ದಾರೆ. ಆರ್‌ಪಿ ಗ್ರೂಪ್ ಕೋಯಿಕ್ಕೋಡ್‌ನ 'ದಿ ರವಿಜ್ ಕಡವು', ಕೊಲ್ಲಂನ 'ದಿ ರವಿಜ್ ಅಷ್ಟಮುಡಿ' ಮತ್ತು ತಿರುವನಂತಪುರಂನ 'ದಿ ರವಿಜ್ ಕೋವಲಂ'ನಲ್ಲಿ ಹೆಲಿಪ್ಯಾಡ್‌ಗಳನ್ನು ಹೊಂದಿದೆ.
ಐಷಾರಾಮಿ ಹೆಲಿಕಾಪ್ಟರ್‌ನಲ್ಲಿ ವಿಶೇಷತೆ ಏನೇನಿದೆ?
ಏರ್‌ಬಸ್ ಎಚ್ 145 ಐಷಾರಾಮಿ ಹೆಲಿಕಾಪ್ಟರ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇದು ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್ ಆಗಿದೆ. ಈ ಐಷಾರಾಮಿ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿ ಒಟ್ಟು 8 ಜನರು ಇದರಲ್ಲಿ ಪ್ರಯಾಣಿಸಬಹುದು. ಇನ್ನು ಈ ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಯಾವುದೇ ಅಪಘಾತದ ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ತಂತ್ರಜ್ಞಾನವನ್ನು ಈ ಹೆಲಿಕಾಪ್ಟರ್ ಹೊಂದಿದೆ ಎಂದು ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದೆ. ಹಾಗೆಯೇ ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನು ಕೂಡಾ ಇದು ಹೊಂದಿದೆ. ಈ ಹೆಲಿಕಾಪ್ಟರ್‌ಗೆ ಇಬ್ಬರು ಪೈಲಟ್‌ಗಳು ಇರಲಿದ್ದಾರೆ. ಈ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿಯೂ ಹಾರುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಹೆಲಿಕಾಪ್ಟರ್ ಸಣ್ಣ ಗಾತ್ರದ ಹೆಲಿಕಾಪ್ಟರ್ ಆಗಿದೆ. ವಿವಿಧ ಕ್ಯಾಬಿನ್‌ಗಳು ಈ ಹೆಲಿಕಾಪ್ಟರ್‌ನಲ್ಲಿ ಇದೆ. ಸುಮಾರು 4 ಟನ್ ತೂಕದ ಹೊಸ ಅವಳಿ ಎಂಜಿನ್ ರೋಟರ್ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್ ಈಗಾಗಲೇ ಆರು ಮಿಲಿಯನ್ ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದೆ ಎಂದು ಕೂಡಾ ವರದಿ ಉಲ್ಲೇಖ ಮಾಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications