ಕಾಸರಗೋಡಿನಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆ
ಕಾಸರಗೋಡು, ಫೆಬ್ರವರಿ 17 : ಕೇರಳದ ಕಾಸರಗೋಡಿನಲ್ಲಿ ಇಬ್ಬರು ಕಾಂಗ್ರೆಸ್ ಯುವ ಕಾರ್ಯಕರ್ತರನ್ನು ಭಾನುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಪರಿಚಿತರು ಕೊಲೆಗೈದು ಪರಾರಿಯಾಗಿದ್ದಾರೆ.
ಕೃಪೇಶ್ ಮತ್ತು ಶರಥ್ ಎಂಬುವವರೇ ಹತ್ಯೆಯಾಗಿರುವ ಯುವ ಕಾರ್ಯಕರ್ತರು. ಅವರ ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಈ ಕೃತ್ಯವನ್ನು ಖಂಡಿಸಿ ಯುನೈಟೆಡ್ ಡೆಮಾಕ್ರೆಡಿಕ್ ಫ್ರಂಟ್ (ಯುಡಿಎಫ್) ಸೋಮವಾರ ಪ್ರತಿಭಟನೆಗೆ ಕರೆ ನೀಡಿದೆ.
ಅವರಿಬ್ಬರನ್ನು ಕಾರಸಗೋಡಿನ ಐತಿಹಾಸಿಕ ಬೇಕಲ್ ಕೋಟೆಯ ಬಳಿ ಪೆರಿಯ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಇಡೀ ಕಾಸರಗೋಡು ಜಿಲ್ಲೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಯುಡಿಎಫ್ ಹೇಳಿಕೆ ನೀಡಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರಕಾರ ಹಿಂಸಾತ್ಮಕ ಕೃತ್ಯಗಳನ್ನು ಹದ್ದುಬಸ್ತಿನಲ್ಲಿಡಲು ಸಂಪೂರ್ಣ ವಿಫಲವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೂ ಕೇರಳದಲ್ಲಿ ಸುರಕ್ಷಿತವಲ್ಲದಿರುವುದು ನಿಜಕ್ಕೂ ದುರ್ದೈವ ಎಂದು ಕಿಡಿ ಕಾರುತ್ತಿದ್ದಾರೆ.
ಈ ಕೃತ್ಯದ ಹಿಂದೆ ಸಿಪಿಐಎಂ ಕಾರ್ಯಕರ್ತರ ಕೈವಾಡವಿದೆ. ಇಬ್ಬರ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪ್ಲಾನ್ ಮಾಡಿ ಮಾಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ.











Click it and Unblock the Notifications