ಶಬರಿಮಲೆ ತೀರ್ಪು: ಕೇರಳ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಇಲ್ಲ!
ತಿರುವನಂತಪುರಂ, ಅಕ್ಟೋಬರ್ 03: ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ಬುಧವಾರ ಹೇಳಿದೆ.
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಇರಲಿಲ್ಲ. ಈ ವಯಸ್ಸಿನ ಹೆಣ್ಣುಮಕ್ಕಳು ಋತುಮತಿಯಾಗುವ ಕಾರಣಕ್ಕೆ ಅವರು ದೇವಾಲಯಕ್ಕೆ ಕಾಲಿಡುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ವಾದಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ಕಳೆದ 800 ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿ ಪಾಲಿಸಿಕೊಂಡು ಬಂದಿತ್ತು.
ಆದರೆ ಈ ಪದ್ಧತಿಯಿಂದ ಮಹಿಳೆಯರನ್ನು ಅಸಮಾನರನ್ನಾಗಿ ಕಾಣಲಾಗುತ್ತಿದೆ ಎಂದ ಸುಪ್ರೀಂ ಕೋರ್ಟ್ ಸೆ.28 ರಂದು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪು ನೀಡಿತು. ಈ ತೀರ್ಪಿಗೆ ಪ್ರತಿಯಾಗಿ ಕೇರಳ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಅದನ್ನು ತಳ್ಳಿಹಾಕಿದ ಕೇರಳ ಸರ್ಕಾರ, ತಾನು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಐ ದೀಪಕ್ ಮಿಶ್ರಾ, ನ್ಯಾ. ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ನ್ಯಾ. ಇಂದು ಮಲ್ಹೋತ್ರಾ ಅವರಿದ್ದ ಪಂಚ ಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿತ್ತು.












Click it and Unblock the Notifications