ಮತದಾರರ ಸಹಾಯಕ್ಕೆ ನಿಂತ ರೋಬೋಟ್; ಕೇರಳದಲ್ಲೊಂದು ಹೊಸ ಪ್ರಯೋಗ
ತಿರುವನಂತಪುರಂ, ಡಿಸೆಂಬರ್ 11: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಗುರುವಾರ ಎರ್ನಾಕುಲಂನ ನಗರ ಸಭೆಯೊಂದರಲ್ಲಿ ಮತದಾನಕ್ಕೆಂದು ಬಂದವರಿಗೆ ಅಚ್ಚರಿ ಕಾದಿತ್ತು.
ಮತದಾರರನ್ನು ಸ್ವಾಗತಿಸಲು, ಅವರ ದೇಹದ ಉಷ್ಣತೆ ಪರೀಕ್ಷಿಸಲು, ಸ್ಯಾನಿಟೈಸರ್ ನೀಡುವ ಕೆಲಸವನ್ನು ಮನುಷ್ಯರ ಬದಲು ರೋಬೋಟ್ ಮಾಡುತ್ತಿದ್ದುದು ಆ ಅಚ್ಚರಿಗೆ ಕಾರಣವಾಗಿತ್ತು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎರ್ನಾಕುಲಂ ಜಿಲ್ಲಾಡಳಿತವು ಸಯಾಬಾಟ್ ಎಂಬ ಈ ರೋಬೋಟ್ ನನ್ನು ಮತದಾನಕ್ಕೆ ತರಿಸಿಕೊಂಡಿತ್ತು. ಈ ರೋಬೋಟ್ ನ ಕಾರ್ಯವೈಖರಿಯೇ ಎಲ್ಲರ ಕಣ್ಸೆಳೆದಿತ್ತು. ಮತದಾನಕ್ಕೆಂದು ಬರುವವರ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿ, ಸ್ಯಾನಿಟೈಸರ್ ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ರೋಬೋಟ್ ನನ್ನೇ ಬೆರಗಿನಿಂದ ಜನರು ನೋಡುತ್ತಾ ನಿಂತರೆ, ಅವರಿಗೆ ಸಾಮಾಜಿಕ ಅಂತರ ಪಾಲನೆ ಮಾಡಬೇಕೆಂಬ ಎಚ್ಚರಿಕೆಯನ್ನೂ ನೀಡುತ್ತಿತ್ತು.

ಜನರ ದೇಹದ ಉಷ್ಣತೆ ಪರೀಕ್ಷಿಸಿ, ನಿರ್ದಿಷ್ಟ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವಿದ್ದರೆ ಘೋಷಣೆ ಮಾಡಿ, ಪೋಲಿಂಗ್ ಅಧಿಕಾರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡುತ್ತಿತ್ತು. ಮಾಸ್ಕ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳುವ ಕೆಲಸವನ್ನು ರೋಬೋಟ್ ನಿರ್ವಹಿಸಿತ್ತು.
ಮತದಾನದ ಸಂದರ್ಭ ಕೋವಿಡ್ ನಿಯಮಗಳನ್ನು ಪಾಲಿಸಲು ರೋಬೋಟ್ ತರಲಾಗಿದೆ. ಈ ಬಾರಿ ರೋಬೋಟ್ ಅನ್ನು ಪ್ರಾಯೋಗಿಕವಾಗಿ ಬಳಸಲಾಗಿದೆ. ಇದರ ಕಾರ್ಯವೈಖರಿ ಯಶಸ್ವಿಯಾದರೆ ಮುಂದೆ ಇನ್ನಷ್ಟು ಕಡೆ ಬಳಸಿಕೊಳ್ಳಲಾಗುವುದು ಎಂದು ಎರ್ನಾಕುಲಂ ಡಿಸಿ ಸುಹಾಸ್ ತಿಳಿಸಿದ್ದಾರೆ.
ಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್ ಗೆಲ್ಲಿ
ಎರ್ನಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲಕ್ಕಡ್, ವೈನಾಡ್ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಮತದಾನ ಗುರುವಾರ ನಡೆದಿದೆ. ಮತದಾನ ಸಮಯದಲ್ಲಿ ರೋಬೋಟ್ ಬಳಕೆಗೆ ಮೆಚ್ಚುಗೆಯೂ ವ್ಯಕ್ತಗೊಂಡಿದೆ.












Click it and Unblock the Notifications