ನಿಮ್ಮನ್ನು ಪ್ರೀತಿ, ಅಹಿಂಸೆಯಿಂದ ಸೋಲಿಸುತ್ತೇವೆ: ಬಿಜೆಪಿಗೆ ರಾಹುಲ್ ಸವಾಲ್
ಕೊಲ್ಲಂ, ಏಪ್ರಿಲ್ 16: 'ನಾವು ಪ್ರೀತಿ ಮತ್ತು ಅಹಿಂಸೆಯನ್ನು ಬಳಸಿ ನೀವು ತಪ್ಪು ಮಾಡಿದ್ದೀರಿ ಎಂಬುದನ್ನು ಅರ್ಥಮಾಡಿಸಿ ನಿಮ್ಮನ್ನು ಸೋಲಿಸುತ್ತೇವೆ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
'ಬಿಜೆಪಿ, ಆರೆಸ್ಸೆಸ್ ಮತ್ತು ಕಾಂಗ್ರೆಸ್ ನಡುವೆ ವ್ಯತ್ಯಾಸವಿದೆ. ಅದೇನೆಂದರೆ, ಅವರು ಹೇಳುತ್ತಾರೆ 'ನಾವು ನಿಮ್ಮನ್ನು ನಂಬದೆ ಇದ್ದರೆ ನಿಮ್ಮನ್ನು ತೆಗೆದುಹಾಕುತ್ತೇವೆ' ಎಂದು. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಅಂದರೆ, ಭಾರತದಿಂದ ಕಾಂಗ್ರೆಸ್‌ಅನ್ನು ನಿರ್ಮೂಲನೆ ಮಾಡುತ್ತೇವೆ ಎನ್ನುತ್ತಾರೆ. ನೀವು ತಪ್ಪು ಹೇಳುತ್ತಿದ್ದೀರಿ ಎಂದು ನಿಮ್ಮ ಮನವೊಲಿಸಲು ನಾವು ಹೋರಾಟ ಮಾಡುತ್ತೇವೆ. ನಿಮ್ಮನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ. ನೀವು ತಪ್ಪು ಮಾಡಿದ್ದೀರಿ ಎಂಬುದನ್ನು ಸಾಬೀತುಪಡಿಸಲು ನಾವು ಪ್ರೀತಿ ಮತ್ತು ಅಹಿಂಸೆಯನ್ನು ಬಳಸುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದರು.

ನೀವು ಎಷ್ಟು ಬಾರಿಯಾದರೂ ನಮ್ಮನ್ನು ಹೊಡೆಯಿರಿ ಅಥವಾ ನಿಂದಿಸಿ. ನಮ್ಮಿಂದ ನಿಮಗೆ ಅಹಿಂಸಾತ್ಮಕ ಪ್ರತಿಕ್ರಿಯೆಯೇ ಬರುತ್ತದೆ ಎಂದರು.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಪ್ರಸ್ತುತ ನಮ್ಮ ದೇಶ ಬಿಜೆಪಿ ಮತ್ತು ಆರೆಸ್ಸೆಸ್‌ನ ಅಡಿಯಲ್ಲಿ ನಲುಗುತ್ತಿದೆ. ತಮ್ಮ ಧ್ವನಿಯನ್ನು ಹೊರತುಪಡಿಸಿ ಉಳಿದೆಲ್ಲ ಧ್ವನಿಗಳನ್ನು ಅಡಗಿಸಲು ಅವರು ಬಯಸಿದ್ದಾರೆ. ಭಾರತವನ್ನು ಒಂದೇ ಚಿಂತನೆ ಆಳಬೇಕು ಎನ್ನುವುದರಲ್ಲಿ ಅವರ ನಂಬಿಕೆ. ಆದರೆ, ಭಾರತವನ್ನು ಭಾರತೀಯ ಜನರು ಆಳಬೇಕು ಎನ್ನುವುದನ್ನು ನಾವು ನಂಬುತ್ತೇವೆ.
ಏಕೆಂದರೆ ಭಾರತ ಎನ್ನುವುದು ಕೇವಲ ಒಂದು ದೃಷ್ಟಿಕೋನವಲ್ಲ. ಭಾರತವು ಒಂದು ಚಿಂತನೆಯಷ್ಟೇ ಅಲ್ಲ. ಭಾರತವು ಲಕ್ಷ ಮತ್ತು ಲಕ್ಷಾಂತರ ವಿಭಿನ್ನ ದೃಷ್ಟಿಕೋನಗಳನ್ನು, ವಿಭಿನ್ನ ಆಲೋಚನೆಗಳನ್ನು ಹೊಂದಿದೆ. ಅದೆಲ್ಲವೂ ನಮಗೆ ಬಹಳ ಮುಖ್ಯವಾಗಿದೆ ಎಂಬ ಸಂದೇಶವನ್ನು ಅವರಿಗೆ ನೀಡಲು ಬಯಸಿದ್ದೇನೆ ಎಂದು ಹೇಳಿದರು.
ಸಾಮಾನ್ಯವಾಗಿ ನಾನು ಉತ್ತರ ಭಾರತದ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆದರೆ, ಈ ಬಾರಿ ನಾನು ಕೇರಳದಿಂದ ಸ್ಪರ್ಧೆಗೆ ಇಳಿಯುವ ಮೂಲಕ ದಕ್ಷಿಣ ಭಾರತಕ್ಕೆ ಸಂದೇಶ ರವಾನಿಸಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ನಿಮ್ಮ ಧ್ವನಿ ಬಹಳ ಮುಖ್ಯವಾಗಿದೆ ಎಂಬುದನ್ನು ದೇಶದ ಪ್ರತಿ ವ್ಯಕ್ತಿಯೂ ತಿಳಿಯುವುದನ್ನು ಬಯಸುತ್ತೇವೆ. ದೇಶದ ಜನರು ಹಿತಕರ ಅನುಭವ ಪಡೆಯುವುದನ್ನು ಬಯಸುತ್ತೇವೆ. ನಾನು ಕೇರಳವನ್ನು ಆಯ್ಕೆ ಮಾಡಿಕೊಂಡಿದ್ದು ನೀವು ಇದರಲ್ಲಿ ತುಂಬಾ ಉತ್ತಮರಿದ್ದೀರಿ ಎಂದು. ನಿಮ್ಮ ಸಹಿಷ್ಣುತೆಯ ಇತಿಹಾಸ, ಮುಕ್ತತೆಯೊಂದಿಗೆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವಿಕೆ ಮತ್ತು ಆತ್ಮವಿಶ್ವಾಸ ಮೆಚ್ಚುವಂಥದ್ದು ಎಂದರು.












Click it and Unblock the Notifications