ವಿಷು ಮುನ್ನ ಇಲ್ಲ ಸಂಬಳ: ಕೆಎಸ್‌ಆರ್‌ಟಿಸಿ ಮುಷ್ಕರಕ್ಕೆ ಎಡ ಪಕ್ಷಗಳ ಕರೆ, ಸರ್ಕಾರಕ್ಕೆ ಇಕ್ಕಟ್ಟು
ತಿರುವನಂತಪುರಂ, ಏಪ್ರಿಲ್ 14: ವೇತನ ವಿಳಂಬ ವಿರೋಧಿಸಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಎಡ ಒಕ್ಕೂಟಗಳು ಇಂದಿನಿಂದ ನೇರ ಮುಷ್ಕರ ನಡೆಸಲಿವೆ. ಕೇರಳದಲ್ಲಿ ಎಡ ಸರ್ಕಾರ ಇರುವಾಗ ತನ್ನದೇ ಪಕ್ಷದ ಸಂಘಟನೆಗಳು ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುವುದು ಕೇರಳ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಎಡ ಸಂಘಟನೆಗಳು ಡಿಪೋಗಳಲ್ಲಿ ಸತ್ಯಾಗ್ರಹ ನಡೆಸಲು ಒಕ್ಕೂಟಗಳು ನಿರ್ಧರಿಸಿವೆ. ಇದರ ಜೊತೆ ವೇತನ ವಿಳಂಬದ ವಿರುದ್ಧ ಕಾಂಗ್ರೆಸ್ ಪರ ಟಿಡಿಎಫ್ ಮತ್ತು ಬಿಜೆಪಿ ಪರ ಬಿಎಂಎಸ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ.
ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳು ನಡೆಸುತ್ತಿರುವ ಮುಷ್ಕರದಿಂದ ಸರಕಾರಕ್ಕೆ ಇಕ್ಕಟ್ಟಿಗೆ ಸಿಲುಕಿದೆ. ಈ ಬೆನ್ನಲ್ಲೇ ಸರ್ಕಾರವು 30 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ವಿಷುಗೂ ಮುನ್ನವೇ ನೌಕರರಿಗೆ ಇಲ್ಲ ವೇತನ!
ವಿಷುಗೂ ಮುನ್ನವೇ ನೌಕರರಿಗೆ ವೇತನ ನೀಡಲು ಸಾಧ್ಯವಾಗದಿರುವುದು ಬಹುತೇಕ ಖಚಿತವಾಗಿದೆ. ವೇತನ ಮತ್ತು ಬಾಕಿ ಪಾವತಿಗೆ 97 ಕೋಟಿ ರೂ ಆಗುತ್ತದೆ. ಆಡಳಿತ ಮಂಡಳಿ ಹಣಕಾಸು ಇಲಾಖೆಗೆ 75 ಕೋಟಿ ಕೇಳಿದ್ದರೂ 30 ಕೋಟಿ ಮಾತ್ರ ಮಂಜೂರಾಗಿದೆ.
ಉಳಿದ ಮೊತ್ತವನ್ನು ತಮ್ಮ ಸ್ವಂತ ಸಂಗ್ರಹದಿಂದ ನೀಡಬೇಕು ಎಂದು ಸರ್ಕಾರದ ಹಣಕಾಸು ಸಚಿವಾಲಯ ಹೇಳಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಹಣಕಾಸು ಇಲಾಖೆಯಿಂದ ಮಂಜೂರಾದ 30 ಕೋಟಿ ರೂ.ಗಳು ಕೆಎಸ್‌ಆರ್‌ಟಿಸಿ ಖಾತೆಗೆ ಬರಲು ಸಮಯ ಹಿಡಿಯುತ್ತದೆ. ಆದ್ದರಿಂದಾಗಿ ವಿಷುವಿಗೆ ಮುನ್ನ ಸಂಬಳ ಲಭಿಸದೆ ಇರುವುದು ಖಚಿತವಾಗಿದೆ.
ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಯು ಕೆಎಸ್‌ಆರ್‌ಟಿಸಿಯಲ್ಲಿ ವ್ಯವಹಾರಗಳ ದುರುಪಯೋಗದ ವಿರುದ್ಧ ಏಪ್ರಿಲ್ 28 ರಂದು ಟೋಕನ್ ಮುಷ್ಕರವನ್ನು ಘೋಷಿಸಿದೆ. ಈ ನಡುವೆ ಗುರುವಾರದಿಂದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನ ಕೇರಳ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಬಾಕಿ ಇರುವ ವೇತನವನ್ನು ನೀಡುವಂತೆ ಒತ್ತಾಯಿಸಿ ಇಲ್ಲಿನ ಮುಖ್ಯ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭ ಮಾಡಿದೆ.

30 ಕೋಟಿ ಮಂಜೂರು ಮಾಡಿದ ಸರ್ಕಾರ
ಪಿಂಚಣಿ ವಿತರಣೆಗೆ 142 ಕೋಟಿ ಮತ್ತು ಒಕ್ಕೂಟದ ಸಾಲ ಮರುಪಾವತಿಗೆ 60 ಕೋಟಿ ಹೊರತುಪಡಿಸಿ ವೇತನ ವಿತರಣೆಗೆ ಹಣಕಾಸು ಇಲಾಖೆ ಬುಧವಾರ ಸಂಜೆ 30 ಕೋಟಿ ಮಂಜೂರು ಮಾಡಿದೆ. ನೌಕರರ ವೇತನ ಪಾವತಿಗೆ ಸುಮಾರು 80 ಕೋಟಿ ಅಗತ್ಯವಿದ್ದು, ಉಳಿದ ಮೊತ್ತವನ್ನು ಸ್ವಂತ ನಿಧಿಯಿಂದ ನೀಡುವಂತೆ ಹಣಕಾಸು ಇಲಾಖೆ ಕೆಎಸ್‌ಆರ್‌ಟಿಸಿಗೆ ಸೂಚಿಸಿದೆ.
"ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ವಿತರಿಸಲಾಗುವುದು ಎಂದು ಸಚಿವರು ಈ ಹಿಂದೆ ಭರವಸೆ ನೀಡಿದ್ದರು. ಈಗ ನಾವು ಮುಷ್ಕರದ ಹಾದಿಯಲ್ಲಿ ಸಾಗಬೇಕಾಗಿದೆ," ಎಂದು ಕೇರಳ ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಶ್ರೀಧರ್ ಹೇಳಿದರು.
ನೌಕರರ ಮುಷ್ಕರದ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಆಂಟನಿ ರಾಜು, "ನೌಕರರು ಮುಷ್ಕರ ಮಾಡಿದರೆ ಕೆಎಸ್‌ಆರ್‌ಟಿಸಿಯಲ್ಲಿ ಆದಾಯ ಬರುವುದಿಲ್ಲ. ಕೆಎಸ್‌ಆರ್‌ಟಿಸಿ ನೌಕರರ ವೇತನ ಸಮಸ್ಯೆಯನ್ನು ಪರಿಹರಿಸಲು ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ನೀಡಿದೆ," ಎಂದು ತಿಳಿಸಿದ್ದಾರೆ.












Click it and Unblock the Notifications