Breaking; ಪೊಲೀಸರ ಹತ್ಯೆ ಸಂಚು, ನಟ ದಿಲೀಪ್ ಅರ್ಜಿ ವಜಾ
ತಿರುವನಂತಪುರಂ, ಏಪ್ರಿಲ್ 18; ನಟ ದಿಲೀಪ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ತನಿಖಾಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರು ನಟನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು.
ಮಂಗಳವಾರ ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಎ. ಎ. ಈ ಕುರಿತು ತೀರ್ಪು ಪ್ರಕಟಿಸಿದರು. ಕೇರಳ ಚಿತ್ರರಂಗವೇ ಕೇರಳ ಹೈಕೋರ್ಟ್ ತೀರ್ಪಿಗಾಗಿ ಕಾದು ಕುಳಿತಿತ್ತು. ಮಾರ್ಚ್ 31ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ಕೋರ್ಟ್, ತೀರ್ಪಿಗೂ ಮೊದಲು ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.

2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರನ್ನು ಹತ್ಯೆ ಮಾಡಲು ನಟ ದಿಲೀಪ್ ಸಂಚು ರೂಪಿಸಿದ್ದಾರೆ ಎಂದು ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಈ ಎಫ್‌ಐಆರ್ ರದ್ದುಗೊಳಿಸುವಂತೆ ದಿಲೀಪ್ ಹೈಕೋರ್ಟ್ ಮೊರೆ ಹೋಗಿದ್ದರು.
ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಇಂತಹ ಎಫ್‌ಐಆರ್ ದಾಖಲು ಮಾಡಲಾಗಿದೆ. ತನ್ನ ಕುಟುಂಬದ ಕೆಲವು ಸದಸ್ಯರೇ ಸೇರಿ ಇಂತಹ ಎಫ್‌ಐಆರ್ ದಾಖಲು ಮಾಡಿಸಿದ್ದಾರೆ, ಇದನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.
ನಟಿಯ ಮೇಲಿನ ದೌರ್ಜನ್ಯ ಪ್ರಕರಣದ ಬಳಿಕ ಇಡೀ ಕೇರಳ ಚಿತ್ರರಂಗವನ್ನೇ ನಟ ದಿಲೀಪ್ ಎದುರು ಹಾಕಿಕೊಂಡಿದ್ದರು. ಈ ಪ್ರಕರಣದಲ್ಲಿ ನಟ ದಿಲೀಪ್ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ತಿರಸ್ಕಾರಗೊಂಡಿತ್ತು. ಬಳಿಕ ಎರಡು ವಾರಗಳ ವಿಸ್ತೃತ ವಿಚಾರಣೆ ಬಳಿಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ನಟಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ವಿರೋಧಿಸಿ ಸಹ ನಟ ದಿಲೀಪ್ ಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿ ಸಹ ವಜಾಗೊಂಡಿತ್ತು. ತನಿಖೆ ಮುಂದುವರೆಸುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿತ್ತು.
ಬಹುಭಾಷಾ ತಾರೆಯನ್ನು 2017ರಲ್ಲಿ ಅಪಹರಣ ಮಾಡಿ ಕಾರಿನಲ್ಲಿಯೇ ಎರಡು ಗಂಟೆಗಳ ಕಾಲ ದೌರ್ಜನ್ಯ ನಡೆಸಲಾಗಿತ್ತು. ಇದನ್ನು ಚಿತ್ರೀಕರಣ ಮಾಡಿಕೊಂಡು ಬೆದರಿಕೆ ಹಾಕಲಾಗಿತ್ತು. ನಟಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಹ ಕೆಲವು ದಿನಗಳ ಹಿಂದೆ ಘಟನೆ ನೆನಪು ಮಾಡಿಕೊಂಡಿದ್ದರು.












Click it and Unblock the Notifications