Breaking News: 'ಭಾರತ್ ಜೋಡೋ ಯಾತ್ರೆ'ಗೆ ಬಲವಂತದ ದೇಣಿಗೆ ಸಂಗ್ರಹ: 3 ಕಾಂಗ್ರೆಸ್ ಕಾರ್ಯಕರ್ತರ ಅಮಾನತು
ಕೊಲ್ಲಂ, ಸೆಪ್ಟೆಂಬರ್ 16: ಕಾಂಗ್ರೆಸ್ ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ ಯಾತ್ರೆ'ಗೆ ಎಂಟು ದಿನಗಳು ಪೂರ್ಣಗೊಂಡಿವೆ. ಈ ನಡುವೆ ಕೇರಳದ ಕೊಲ್ಲಂನಲ್ಲಿ ಪಕ್ಷದ ಮೆರವಣಿಗೆಗೆ ಹಣಕಾಸಿನ ನೆರವು ಕೋರಿದ ಘಟನೆ ನಡೆದಿದೆ. ತರಕಾರಿ ಅಂಗಡಿಯ ಮಾಲೀಕರಿಗೆ ಬೆದರಿಕೆ ಹಾಕುವ ಮತ್ತು ಸಾಕಷ್ಟು ಹಣದ ನೆರವು ನೀಡದಿದ್ದರೆ ಅವರ ಅಂಗಡಿ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುವ ವಿಡಿಯೊ ವೈರಲ್ ಆಗಿದೆ. ಇದರಿಂದಾಗಿ ಕಾಂಗ್ರೆಸ್ ಗೂಂಡಾಗಿರಿ ಆರೋಪದ ಟೀಕೆಗಳನ್ನು ಎದುರಿಸುತ್ತಿದೆ.
ಆದರೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಘಟನೆಯನ್ನು 'ಸ್ವೀಕಾರಾರ್ಹವಲ್ಲ' ಎಂದು ಕರೆದಿದೆ. ಜೊತೆಗೆ ಇದರಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಿದೆ ಎಂದು ಹೇಳಿದೆ. "ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ. ಅಂತಹ ನಡವಳಿಕೆಯು ಕ್ಷಮಿಸಲಾಗದು" ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಟ್ವೀಟ್ ಮಾಡಿದ್ದಾರೆ.
ತರಕಾರಿ ಮಾರಾಟಗಾರರೊಂದಿಗೆ ಅನಿಮೇಟೆಡ್ ವಾದದಲ್ಲಿ ಪುರುಷರ ಗುಂಪನ್ನು ವಿಡಿಯೊಗಳು ತೋರಿಸುತ್ತವೆ. ಕೆಲವರು 'ಭಾರತ್ ಜೋಡೋ ಯಾತ್ರೆ'ಯ ಪೋಸ್ಟರ್‌ಗಳನ್ನು ಹೊತ್ತಿದ್ದಾರೆ. ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಯಾತ್ರೆಗೆ ಬಲವಂತದ ದೇಣಿಗೆ ಸಂಗ್ರಹ
ಅವರಲ್ಲಿ ಒಬ್ಬರು ತರಕಾರಿಗಳನ್ನು ಎಸೆದು ಅಂಗಡಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಿರುವುದು ಕಂಡು ಬಂದಿದೆ. ಹಣ ಕೇಳುವವರು ₹ 2,000 ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಆದರೆ ಅಂಗಡಿ ಮಾಲೀಕರು ಕೇವಲ ₹ 500 ನೀಡಲು ಸಾಧ್ಯವಾಯಿತು. ಈ ವೇಳೆ ಅವರು ಬೆದರಿಕೆ ಹಾಕಿದ್ದಾರೆ. ಈ ಗುಂಪು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಅನೀಶ್ ಖಾನ್ ಸೇರಿದಂತೆ ಐವರ ಗುಂಪಾಗಿತ್ತು. ಘಟನೆಯ ಬಳಿಕ ಅಂಗಡಿ ಮಾಲೀಕ ಎಸ್ ಫವಾಝ್ ಕುನ್ನಿಕೋಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಪ್ರತಿಪಕ್ಷಗಳ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿವೆ.
|
ಕೇರಳದಲ್ಲಿ 3 ಕಾಂಗ್ರೆಸ್ ಕಾರ್ಯಕರ್ತರ ಅಮಾನತು
ರಾಜ್ಯ ಘಟಕದ ರಾಜಕೀಯವು ಸಣ್ಣ ದೇಣಿಗೆಯ ಮೇಲೆ ನಡೆಯುತ್ತದೆ ಎಂದು ವಿವರಿಸಿದ ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, "ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ವರ್ಷಗಳಿಂದ ಕ್ರೌಡ್‌ಫಂಡಿಂಗ್ ಮಾಡುತ್ತಿದೆ. ಅವರ ರಾಜಕೀಯವು ತಳಮಟ್ಟದಲ್ಲಿ ಸಣ್ಣ ದೇಣಿಗೆಗಳ ಮೇಲೆ ನಡೆಯುತ್ತದೆ. ಆದರೆ ಇದು ಆಗಬಾರದಿತ್ತು. ಈ ಮೂವರ ವಿರುದ್ಧ ಪಿಸಿಸಿ ಅಧ್ಯಕ್ಷರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
|
18 ದಿನಗಳ ಕಾಲ ಕೇರಳದ ಮೂಲಕ ಸಂಚರ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನಗಳ ಸುದೀರ್ಘ 3,500 ಕಿಮೀ ಪಾದಯಾತ್ರೆಯನ್ನು ಸೆಪ್ಟೆಂಬರ್ 7 ರಂದು ನೆರೆಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಿಸಲಾಯಿತು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಯಾತ್ರೆಯು ಮುಂದಿನ 18 ದಿನಗಳ ಕಾಲ ಕೇರಳದ ಮೂಲಕ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ಇದು ಉತ್ತರಕ್ಕೆ ಚಲಿಸುವ ಮೊದಲು 21 ದಿನಗಳ ಕಾಲ ಕರ್ನಾಟಕದಲ್ಲಿರುತ್ತದೆ. ಪಾದಯಾತ್ರೆ (ಮೆರವಣಿಗೆ) ಪ್ರತಿದಿನ 25 ಕಿ.ಮೀ ದೂರವನ್ನು ಕ್ರಮಿಸಲಿದೆ.

ದೇಶದ ಜನರನ್ನು ಜಾಗೃತಗೊಳಿಸುವ ಯಾತ್ರೆ
ಭಾರತ್ ಜೋಡೋ ಯಾತ್ರೆಯ ಸ್ಪೂರ್ತಿಯು ಧರ್ಮ, ಸಮುದಾಯವನ್ನು ಲೆಕ್ಕಿಸದೆ ಭಾರತೀಯರನ್ನು ಒಟ್ಟುಗೂಡಿಸುವುದು ಮತ್ತು ಇದು ಒಂದೇ ದೇಶ ಎಂದು ನೆನಪಿಸುವುದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಒಟ್ಟಿಗೆ ನಿಂತರೆ ಮತ್ತು ಪರಸ್ಪರ ಗೌರವದಿಂದ ಇದ್ದರೆ ಯಶಸ್ವಿಯಾಗುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪ್ರಕಾರ, ಬಿಜೆಪಿ ನೇತೃತ್ವದ ಕೇಂದ್ರದ ವಿಭಜಕ ರಾಜಕೀಯವನ್ನು ಎದುರಿಸಲು ಮತ್ತು ಆರ್ಥಿಕ ಅಸಮಾನತೆಗಳು, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಅಧಿಕಾರದ ಕೇಂದ್ರೀಕರಣದ ಅಪಾಯಗಳ ಬಗ್ಗೆ ದೇಶದ ಜನರನ್ನು ಜಾಗೃತಗೊಳಿಸಲು 'ಭಾರತ್ ಜೋಡೋ ಯಾತ್ರೆ' ನಡೆಸಲಾಗುತ್ತಿದೆ.












Click it and Unblock the Notifications