ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲೇ ಆಸ್ಪತ್ರೆ ಸೇರಿದ ಸ್ಟಾರ್ ನಟ
ತಿರುವನಂತಪುರಂ, ಮಾರ್ಚ್ 14: ರಾಜ್ಯಸಭಾ ಸದಸ್ಯರಾಗಿದ್ದ ಮಲಯಾಳಂ ಸೂಪರ್ ಸ್ಟಾರ್ ನಟ ಸುರೇಶ್ ಗೋಪಿ ಅವರು ಚುನಾವಣಾ ಹೊಸ್ತಿಲಲ್ಲೇ ಆಸ್ಪತ್ರೆ ಸೇರಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿರುವ ಸಂದರ್ಭದಲ್ಲೇ ಸುರೇಶ್ ಅವರು ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ನಡೆಸಿದ್ದ ಸುರೇಶ್ ಗೋಪಿ ಅವರು ನಂತರ ಬಿಜೆಪಿ ಸೇರಿದ್ದರು. ಗೋಪಿ ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನವನ್ನು ಮೋದಿ ಕೊಡಿಸಿದ್ದರು.
ಸದ್ಯ ಪಾಪ್ಪನ್ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದ ಸುರೇಶ್ ಗೋಪಿ, ನ್ಯುಮೋನಿಯಾಕ್ಕಾಗಿ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಹಿಂದೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, ಗೋಪಿ ಅವರು ಬಿಜೆಪಿ ಆಫರ್ ತಿರಸ್ಕರಿಸಿದ್ದರು. ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. 2016ರಲ್ಲಿ ರಾಜ್ಯಸಭಾ ಸದಸ್ಯರಾದರು. ಲೋಕಸಭಾ ಚುನಾವಣೆಯಲ್ಲಿ ತ್ರಿಸ್ಸೂರ್ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

ಎರಡು ಕ್ಷೇತ್ರಗಳಲ್ಲಿ ಸುರೇಶ್ ಗೋಪಿ ಹೆಸರು
ಸ್ಟಾರ್ ನಟ ಸುರೇಶ್ ಗೋಪಿ ಅವರನ್ನು ತಿಶ್ಶೂರ್ ಅಥವಾ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಬಯಸಿದ್ದಾರೆ. ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಈ ನಡುವೆ 10 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಬಹುತೇಕ ತಿಶ್ಶೂರ್ ಕ್ಷೇತ್ರದ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ, 115 ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಿ ನಂತರ ಇತರೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಹೆಸರಿಸಲಾಗುವುದು ಎಂದು ಕೇರಳ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ
ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ನಾಯರ್ ಕುಟುಂಬದ ಗೋಪಿ ಅವರು ಈ ಹಿಂದೆ ಬಿಜೆಪಿ ಸೇರಿಸಿಕೊಳ್ಳುವ ಯತ್ನ ಹಲವು ಬಾರಿ ಸಫಲವಾಗಿರಲಿಲ್ಲ. ಆದರೆ, ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಅವರ ತಾರಾ ಮೌಲ್ಯ ಹೆಚ್ಚಿತ್ತು. 'ಕೋಟ್ಯಧಿಪತಿ' ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.

ಅಭಿವೃದ್ಧಿ ಪರ ದನಿಯೆತ್ತಿದ್ದ ಗೋಪಿ
ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು. ಹೀಗಾಗಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ, ಕೇರಳದಲ್ಲಿ ಮಿತ್ರಪಕ್ಷ ಭಾರತ್ ಧರ್ಮ ಜನ ಸೇನಾ ಪಕ್ಷದ ಮೂಲಕ ಬಿಜೆಪಿ ಪರ ದನಿಯಾಗಿದ್ದರು.

ವಿಧಾನಸಭೆ ಸ್ಪರ್ಧೆ: ಪ್ರತ್ಯೇಕ ರಣತಂತ್ರ ಅನುಸರಿಸುತ್ತಿದ್ದಾರೆ
ಚಲನಚಿತ್ರಗಳ ಜನಪ್ರಿಯತೆ, ಮೋದಿ ಬೆಂಬಲದ ನಂತರ ಕೇರಳ ಬಿಜೆಪಿ ಅಸೆಂಬ್ಲಿಯಲ್ಲಿ ಹೆಚ್ಚಿನ ಸ್ಥಾನ ಹೊಂದುವ ಕನಸು ಕಾಣುತ್ತಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಗೋಪಿ ಮೆಚ್ಚಿಕೊಂಡಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ಹೊಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿನ ಸೋಲು ಗೋಪಿಗೆ ಪಾಠ ಕಲಿಸಿದೆ ಆದರೆ, ವಿಧಾನಸಭೆ ಕಣಕ್ಕೆ ಪ್ರತ್ಯೇಕ ರಣತಂತ್ರ ಅನುಸರಿಸುತ್ತಿದ್ದಾರೆ ಎಂದು ಸುದ್ದಿಯಿದೆ.












Click it and Unblock the Notifications