ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಎಫ್‌ಐಆರ್ ದಾಖಲು
ತಿರುವನಂತಪುರಂ, ಜೂನ್ 03 : ಕೇರಳದಲ್ಲಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ನೀಡಿ ಮಣಪ್ಪುರಂನಲ್ಲಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕೃತ್ಯದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.

"ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅನ್ವಯ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ" ಎಂದು ಮಣಪ್ಪುರಂ ವಲಯ ಅರಣ್ಯಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಹಿಂದೆಯೂ ಹತ್ಯೆ : ಕೊಲ್ಲಂ ಜಿಲ್ಲೆಯ ಪುನಲೂರ್ ಅರಣ್ಯ ಪ್ರದೇಶದಲ್ಲಿಯೂ ಹಿಂದೆ ಇದೇ ಮಾದರಿಯಲ್ಲಿ ಆನೆಯನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಏಪ್ರಿಲ್ ತಿಂಗಳಿನಲ್ಲಿ ಹೆಣ್ಣು ಆನೆಯೊಂದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಆನೆಯ ದವಡೆ ಮುರಿದಿದ್ದು, ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ನಿತ್ರಾಣಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅದು ಮೃತಪಟ್ಟಿತ್ತು. ಸ್ಫೋಟಕ ತುಂಬಿದ ಆಹಾರ ನೀಡಲಾಗಿದೆ ಎಂಬ ಅನುಮಾನ ಉಂಟಾಗಿದೆ.
ಸವಾಲಿನ ಕೆಲಸ : ಆನೆಗಳ ಇಂತಹ ಸಾವಿನ ಕುರಿತು ತನಿಖೆ ನಡೆಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ. ಆನೆಗಳು ಪ್ರತಿದಿನ ನೂರಾರು ಕಿ. ಮೀ. ಸಂಚಾರ ನಡೆಸುತ್ತವೆ. ಆಹಾರ ಅರಸಿಕೊಂಡು ಅಲೆದಾಡುತ್ತವೆ. ಆದ್ದರಿಂದ ಇಂತಹ ಸ್ಥಳದಲ್ಲಿಯೇ ಪ್ರಕರಣ ನಡೆದಿದೆ ಎಂದು ಮಾಹಿತಿ ಸಂಗ್ರಹ ಮಾಡುವುದು ಕಷ್ಟ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.












Click it and Unblock the Notifications