ಶಬರಿಮಲೆ ದೇಗುಲ ಹೋರಾಟಕ್ಕೆ ಮೊದಲ ಬಲಿ: ಬಿಜೆಪಿ ಪ್ರತಿಭಟನೆ ತೀವ್ರ
Recommended Video

ತಿರುವನಂತಪುರಂ, ಡಿಸೆಂಬರ್ 14: ಶಬರಿ ದೇಗುಲ ಸುತ್ತಮುತ್ತ ಪೊಲೀಸರು ಹೇರಿರುವ ನಿರ್ಬಂಧ ಕ್ರಮಗಳ ತೆರವಿಗೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ವ್ಯಕ್ತಿಯೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದು, ಶುಕ್ರವಾರ ಬಿಜೆಪಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ.
ಮೃತ ವ್ಯಕ್ತಿಯನ್ನು ಮುತ್ತಡದ ಆಟೋ ಚಾಲಕ ವೇಣುಗೋಪಾಲ್ ನಾಯರ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ತನ್ನ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದ್ದರೂ ಅಯ್ಯಪ್ಪ ಭಕ್ತನ ಸಾವಿಗೆ ರಾಜ್ಯ ಸರ್ಕಾರ ಕಾರಣ ಎಂದು ಆರೋಪಿಸಿರುವ ಬಿಜೆಪಿ, ಶುಕ್ರವಾರ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ.
ಆದರೆ ವೇಣುಗೋಪಾಲನ್ ಸಾವಿಗೂ ಶಬರಿಮಲೆ ಸುತ್ತ ಹೇರಲಾದ ನಿರ್ಬಂಧಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ವಿವಿಧ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಶಬರಿಮಲೆ ಸುತ್ತಮುತ್ತಲೂ ಹಲವು ದಿನಗಳ ಕಾಲ ಭಾರೀ ಪ್ರತಿಭಟನೆ ನಡೆಸಿದ್ದವು. ಅಲ್ಲದೆ ದೇಗುಲ ಪ್ರವೇಶಕ್ಕೆ ಆಗಮಿಸಿದ್ದ ಹಲವು 10-50 ವರ್ಷದ ಮಹಿಳೆಯರನ್ನು ಹಿಂದಕ್ಕೆ ಕಳುಹಿಸಿತ್ತು.

ಇದೀಗ ಕೇರಳದಲ್ಲಿ ಬಿಜೆಪಿ ಹರತಾಳ ಆರಂಭವಾಗಿದೆ. ಸಮೂಹ ಸಾರಿಗೆ ಸಂಪೂರ್ಣ ಬಂದ್ ಆಗಿದ್ದು ಕೇವಲ ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿವೆ. ಗುರುವಾರ ನಿರ್ಬಂಧ ತೆರವಿಗೆ ಒತ್ತಾಯಿಸಿ ಬಿಜೆಪಿ ನಾಯಕ ಪದ್ಮನಾಭನ್ ವಿಧಾನಸಭೆ ಸಮೀಪವೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಗುರುವಾರ ಬೆಳಗಿನ ಜಾವ 2 ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ವೇಣುಗೋಪಾಲನ್ ಬದಿದ್ದ, ಅಲ್ಲಿ ಬಿಜೆಪಿ ಕಾರ್ಯಕರ್ತರ ಬಳಿ ತಾನು ಅಯ್ಯಪ್ಪನ ಭಕ್ತನಾಗಿದ್ದು, ದೇವರಿಗೋಸ್ಕರ ಪ್ರಾಣ ಬಿಡಲೂ ಸಿದ್ಧ ಎಂದು ಹೇಳಿದ್ದ, ಆದರೆ ಆ ಸಮಯದಲ್ಲಿ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ .
ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ಪ್ರತಿಭಟನೆ ಕಾವು ಇನ್ನಷ್ಟು ಜೋರಾಗಿದೆ. ಹಿಂಸಾಚಾರ ಘಟನೆಗಳು ವರದಿಯಾಗುವ ಸಾಧ್ಯತೆಗಳಿವೆ. ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.












Click it and Unblock the Notifications