ರಾಹುಲ್ ಗಾಂಧಿಯಿಂದ ಪಾಕಿಸ್ತಾನಕ್ಕೆ ನೆರವು: ಗುಡುಗಿದ ಸತ್ಯಪಾಲ್ ಮಲೀಕ್
ಶ್ರೀನಗರ, ಆಗಸ್ಟ್ 26: ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ನೆರವು ನೀಡುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲೀಕ್ ಗುಡುಗಿದ್ದಾರೆ.
"ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಯಿಲ್ಲ. ಅಲ್ಲಿನ ಜನರು ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಮೊದಲಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ನಿಮ್ಮ ಹೇಳಿಕೆ ಸುಳ್ಳು, ಕಾಶ್ಮೀರ ಶಾಂತವಾಗಿದೆ ಒಮ್ಮೆ ಬಂದು ನೋಡಿ ಹೋಗಿ" ಎಂದು ನಾನು ಅವರಿಗೆ ಹೇಳಿದ್ದೆ. ಆದರೆ ನನ್ನ ಆಮಂತ್ರಣವನ್ನು ಬೇರೆ ರೀತಿ ಅರ್ಥೈಸಿಕೊಂಡ ರಾಹುಲ್ ಗಾಂಧಿ ಒಂದು ನಿಯೋಗವನ್ನೇ ಕರೆತರಲು ಮುಂದಾದರು. ನಂತರ ಇಲ್ಲಿನ ಜನರು, ಕೈದಿಗಳು, ಭದ್ರತಾ ಸಿಬ್ಬಂದಿಗಳಿ ಮಾತನಾಡುವುದಾಗಿ ಹೇಳಿದರು. ಅದಕ್ಕೆ ನಾನು ಭದ್ರತೆಯ ದೃಷ್ಟಿಯಿಂದ ಸಾಧ್ಯವಿಲ್ಲ ಎಂದು ಹೇಳಿದೆ" ಎಂದು ಸತ್ಯಪಾಲ ಮಲೀಕ್ ಹೇಳಿದರು.
"ಆದರೆ ನನ್ನ ಆಮಂತ್ರಣವನ್ನು ದುರುಪಯೋಗ ಪಡಿಸಿಕೊಂದ ರಾಹುಲ್ ಗಾಂಧಿ, ಕಾಶ್ಮೀರಕ್ಕೆ ಬಂದು ಇಲ್ಲಿನ ಪರಿಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಅಸಂಬದ್ಧ ಹೇಳಿಕೆಯಿಂದಾಗಿ ಅವರು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನಕ್ಕೆ ನೆರವು ನೀಡುವುದಂತಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಕಾಶ್ಮೀರ ತನಗೆ ಬೇಕಾದಂತೆ ಅರ್ಥೈಸಿಕೊಳ್ಳಬಹುದು. ಕಾಶ್ಮೀರ ಭಾರತದ ಆಂತರಿಕ ವಿಷಯ. ಆದರೆ ಇದರ ಬಗ್ಗೆ ಪಾಕಿಸ್ತಾನ ಮಾತನಾಡುವುದಕ್ಕೆ ರಾಹುಲ್ ಗಾಂಧಿ ದಾರಿ ಮಾಡಿಕೊಡುತ್ತಿದ್ದಾರೆ" ಎಂದು ಸತ್ಯಪಾಲ್ ಮಲೀಕ್ ದೂರಿದರು.

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಂತರವೂ ಕಾಶ್ಮೀರ ಸಹಜ ಸ್ಥಿತಿಯಲ್ಲಿದೆ. ಇಲ್ಲಿ ಯಾವುದೇ ಹಿಂಸಾಚಾರದ ಘಟನೆ ನಡೆದಿಲ್ಲ ಎಂದು ಮಲೀಕ್ ಹೇಳಿದರು.












Click it and Unblock the Notifications