19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ
ಶ್ರೀನಗರ, ಫೆಬ್ರವರಿ 15 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿ ರಾಜ್ಯದಲ್ಲಿ 19 ವರ್ಷಗಳ ಬಳಿಕ ನಡೆದ ದೊಡ್ಡ ಉಗ್ರರ ದಾಳಿಯಾಗಿದೆ. ಗುರುವಾರ ಮಧ್ಯಾಹ್ನ ನಡೆದ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಪುಲ್ವಾಮದ ಅವಂತಿಪುರ್‌ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿದ್ದ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.

2001ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಆ ದಾಳಿಯಲ್ಲಿ 38 ಜನರು ಮೃತಪಟ್ಟಿದ್ದರು. ಪುಲ್ವಾಮದಲ್ಲಿ ಸೇನಾ ಯೋಧರ ವಾಹನ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ.
2001ರ ಅಕ್ಟೋಬರ್ 1ರಂದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು. ರಾಜ್ಯದ ವಿಧಾನಸಭೆ ಕಟ್ಟಡಕ್ಕೆ ಸ್ಫೋಟಕ ತುಂಬಿದ ಟಾಟಾ ಸುಮೋವನ್ನು ನುಗ್ಗಿಸಲಾಗಿತ್ತು.
ವಿಧಾನಸಭೆಯ ಮುಖ್ಯ ಗೇಟ್ ಮೂಲಕ ಟಾಟಾ ಸುಮೋವನ್ನು ನುಗ್ಗಿಸಿ ನಡೆಸಿದ ದಾಳಿಯಲ್ಲಿ 38 ಜನರು ಮೃತಪಟ್ಟಿದ್ದರು. ವಾಹನ ನುಗ್ಗುತ್ತಿದ್ದಂತೆ ನಡೆದ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಕೊಂದು ಹಾಕಲಾಗಿತ್ತು.
2019ರ ಫೆ.14ರಂದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೇ ಮಾದರಿಯ ದಾಳಿಯನ್ನು ನಡೆಸಿದೆ. ಸ್ಫೋಟಕ ತುಂಬಿದ್ದ ಸ್ಕಾರ್ಫಿಯೋ ಕಾರನ್ನು ಸೇನಾ ವಾಹನಕ್ಕೆ ಗುದ್ದಲಾಗಿದೆ. ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಉಗ್ರನ ಮೂಲಕ ಈ ದಾಳಿಯನ್ನು ನಡೆಸಲಾಗಿದೆ.












Click it and Unblock the Notifications