ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಲಘು ಭೂಕಂಪನ
ಶ್ರೀನಗರ್, ಅಕ್ಟೋಬರ್.08: ಕಣಿವೆ ರಾಜ್ಯದಲ್ಲಿ ಗುರುವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಲಡಾಖ್ ನ ಕಾರ್ಗಿಲ್ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ 22 ನಿಮಿಷಕ್ಕೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 4.2ರಷ್ಟು ದಾಖಲಾಗಿದೆ.
ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲಹೊತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಭೂಕಂಪನದ ಬಗ್ಗೆ ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರವು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದೆ.
ಲಡಾಖ್ ನ ಕಾರ್ಗಿಲ್ ಪ್ರದೇಶದಲ್ಲಿ ಅಕ್ಟೋಬರ್.08, 2020ರ ಬೆಳಗ್ಗೆ 9.22 ಗಂಟೆಗೆ ಭೂಮಿ ಕಂಪಿಸಿದೆ. 35.36ರಷ್ಟು ಲ್ಯಾಟ್, 75.81ರಷ್ಟು ಉದ್ದ 10 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ" ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ.

ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ:
ಜಮ್ಮು ಕಾಶ್ಮೀರ ಲಡಾಖ್ ನ ಕಾರ್ಗಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಕಳೆದ ಎರಡು ವಾರಗಳ ಹಿಂದೆ ಕೂಡಾ ಎರಡರಿಂದ ಮೂರು ಬಾರಿ ಜಮ್ಮು ಕಾಶ್ಮೀರದ ಹಲವೆಡೆ ಭೂಕಂಪನ ಸಂಭವಿಸಿತ್ತು. ಶ್ರೀನಗರದಲ್ಲಿ ಸಪ್ಟೆಂಬರ್.23ರ ಮಂಗಳವಾರ ರಾತ್ರಿ 9.40ರ ವೇಳೆಗೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.6ರಷ್ಟು ದಾಖಲಾಗಿತ್ತು. ಭೂಮಿಯಿಂದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದ್ದು, ಭೂಕಂಪನದ ಕೇಂದ್ರಬಿಂದು ಶ್ರೀನಗರದಿಂದ ಉತ್ತರ ಭಾಗದಲ್ಲಿ 11 ಕಿಲೋ ಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿದು ಬಂದಿತ್ತು.












Click it and Unblock the Notifications