ಕಾಂಗ್ರೆಸ್ ತೊರೆದ ನಂತರ ಸೆ.4 ರಂದು ಜಮ್ಮುವಿನಲ್ಲಿ ಗುಲಾಂ ನಬಿ ಮೊದಲ ರ್‍ಯಾಲಿ
ಶ್ರೀನಗರ ಆಗಸ್ಟ 31: ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ಅವರು ಸೆಪ್ಟೆಂಬರ್ 4 ರಂದು ಜಮ್ಮುವಿನಲ್ಲಿ ತಮ್ಮ ಚೊಚ್ಚಲ ರ್‍ಯಾಲಿಯನ್ನು ನಿಗದಿಪಡಿಸಿದ್ದಾರೆ. ಅದೇ ದಿನ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಜಾದ್ ಅವರ ಕಾರ್ಯಕ್ರಮದ ದಿನದಂದೇ ರಾಹುಲ್ ಗಾಂಧಿಯವರ ರ್‍ಯಾಲಿ ನಡೆಯುವರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಕಾರ್ಯಕ್ರಮವೇ ನಡೆಯಲಿದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಮಾತನಾಡಲಿದ್ದಾರೆ. ಕಾಂಗ್ರೆಸ್ ತೊರೆದ ಆಜಾದ್ ಅವರು ಆರೋಪಗಳ ಸುರಿಮಳೆ ಗೈದುದ್ದರಿಂದ ಮುಂಬರುವ ದಿನಗಳಲ್ಲಿ ಅವರು ರಾಹುಲ್ ಗಾಂಧಿಯ ಮೇಲಿನ ದಾಳಿಯನ್ನು ಹೆಚ್ಚಿಸಲಿದ್ದಾರೆ ಎಂದು ಸೂಚಿಸುತ್ತದೆ.
ವಿಧಾನಸಭೆ ಚುನಾವಣೆ ಘೋಷಣೆಯಾಗಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ತಮ್ಮದೇ ಆದ ಪಕ್ಷ ಕಾಣಿಸಿಕೊಳ್ಳುವುದಾಗಿ ಅವರು ಈಗಾಗಲೇ ಹೇಳಿದ್ದಾರೆ. ಜಮ್ಮುವಿನ ಸೈನಿಕ್ ಫಾರ್ಮ್ಸ್‌ನಲ್ಲಿ ಆಜಾದ್ ಅವರ ಭಾನುವಾರದ ರ್‍ಯಾಲಿಗೂ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನಲ್ಲಿ ರಾಜೀನಾಮೆಗಳ ಸರಣಿ ನಡೆದಿದೆ.
ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ ಇನ್ನೂ 64 ನಾಯಕರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಮಂಗಳವಾರ ಗುಲಾಂ ನಬಿ ಆಜಾದ್ ಶಿಬಿರವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷದ ಘಟಕವನ್ನು ಛಿದ್ರಗೊಳಿಸಿದ್ದಾರೆ.

ಪಕ್ಷ ತೊರೆದ ಗುಲಾಂ ನಬಿ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಕಳೆದ ಶುಕ್ರವಾರ ಸೋನಿಯಾ ಗಾಂಧಿ ಅವರಿಗೆ ಬರೆದ ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡಿದ್ದರು. ಆಜಾದ್ ಅವರು ರಾಹುಲ್ ಗಾಂಧಿಯನ್ನು "ಅಪ್ರಬುದ್ಧ" ಎಂದು ಬಣ್ಣಿಸುವ ಮೂಲಕ ಕುಟುಕು ವಾಗ್ದಾಳಿ ನಡೆಸಿದರು. "ಗಂಭೀರವಲ್ಲದ ವ್ಯಕ್ತಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ" ಎಂದು ಆರೋಪಿಸಿದರು.
ಆಜಾದ್ ಅವರು ರಾಹುಲ್ ಗಾಂಧಿಯನ್ನು ಏಳು ಬಾರಿ ಪ್ರಸ್ತಾಪಿಸಿದ್ದಾರೆ. ಅವರು ಪಕ್ಷವನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿರುವ 73 ವರ್ಷದ ಆಜಾದ್, "ಯುಪಿಎ ಸರ್ಕಾರದ ಸಾಂಸ್ಥಿಕ ಸಮಗ್ರತೆಯನ್ನು ಕೆಡವುವ ರಿಮೋಟ್ ಕಂಟ್ರೋಲ್ ಮಾದರಿಯನ್ನು" ಪಕ್ಷಕ್ಕೆ ಅನ್ವಯಿಸಿದ್ದಕ್ಕಾಗಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಸೋನಿಯಾ ಗಾಂಧಿ ಅವರು ಕೇವಲ "ನಾಮಮಾತ್ರದ ವ್ಯಕ್ತಿ" ಮತ್ತು ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಹುಲ್ ತೆಗೆದುಕೊಳ್ಳುತ್ತಿದ್ದಾರೆ ಅಥವಾ "ಅವರ ಭದ್ರತಾ ಸಿಬ್ಬಂದಿ ಅಥವಾ ಪಿಎಗಳು ಕೆಟ್ಟದಾಗಿ ನಿರ್ಧಾರ" ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದೊಳಗೆ ರಾಹುಲ್ ಗಾಂಧಿಯವರ ನಡವಳಿಕೆಯನ್ನು ಆಜಾದ್ ಟೀಕಿಸಿದರು.

ನಬಿ ರಾಹುಲ್ ಗಾಂಧಿ ಸಂಬಂಧ
1977ರಲ್ಲಿ ಕಾಶ್ಮೀರದ ಮುಸಲ್ಮಾನ ನಾಯಕ ಒಬ್ಬ ಜೊತೆಗೆ ಇರಲಿ ಎಂದು ಸಂಜಯ ಗಾಂಧಿ ಶ್ರೀನಗರದಿಂದ ದಿಲ್ಲಿಗೆ ಕರೆದುಕೊಂಡು ಬಂದಿದ್ದು ಗುಲಾಂ ನಬಿ ಆಜಾದ್‌ರನ್ನು. ವಿಪರೀತ ಚಳಿ ಪ್ರದೇಶದಿಂದ ಬಂದಿದ್ದ ಗುಲಾಂ ನಬಿ ದಿಲ್ಲಿಯ ಬಿಸಿಲಿನಿಂದ ಮೂಗು ಸೋರುತ್ತದೆ, ನಾನು ವಾಪಸ್ ಹೋಗುತ್ತೇನೆ ಎಂದಾಗ ಸಂಜಯ ಗಾಂಧಿ ಬೇಡ ಇರು ಎಂದು ಉಳಿಸಿಕೊಂಡಿದ್ದರು.
ಕಾಶ್ಮೀರದ ಗುಲಾಂ ನಬಿಯನ್ನು 1980 ಮತ್ತು 84ರಲ್ಲಿ ಮಹಾರಾಷ್ಟ್ರದಿಂದ ಲೋಕಸಭೆಗೆ ತಂದ ಗಾಂಧಿ ಕುಟುಂಬ 1989ರಿಂದ 33 ವರ್ಷ ಸತತವಾಗಿ ರಾಜ್ಯಸಭೆಗೆ ತಂದು ಮಧ್ಯೆ ಒಮ್ಮೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಕೂಡ ಮಾಡಿತ್ತು. ನಿಸ್ಸಂದೇಹವಾಗಿ ಗುಲಾಂ ನಬಿ ಸೋನಿಯಾರಿಗೆ ನಿಷ್ಠ. ಆದರೆ ಮಗ ರಾಹುಲ್ ಜೊತೆ ಆಜಾದ್‌ರಿಗೆ ಅಷ್ಟಕಷ್ಟೆ. 2 ವರ್ಷದಿಂದ ರಾಹುಲ್ ಗಾಂಧಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದು ಬೇಸರ ಹೊರಹಾಕುತ್ತಿದ್ದ ಗುಲಾಂ ನಬಿ ತಮ್ಮನ್ನು ಮರಳಿ ರಾಜ್ಯಸಭೆಗೆ ತರದ ಗಾಂಧಿ ಕುಟುಂಬದ ಜೊತೆ ಇದ್ದಾದರೂ ಏನು ಪ್ರಯೋಜನ ಎಂದು ಕೊನೆಗೂ ಹೊರಬಿದ್ದಿದ್ದಾರೆ.

ಗುಲಾಂ ರಾಜೀನಾಮೆ ಈಗ ಏಕೆ?
ಕಳೆದ ತಿಂಗಳು ರಾಜ್ಯಸಭಾ ಚುನಾವಣೆಗೆ ಟಿಕೆಟ್ ಕೊಡುವಾಗ ತಮ್ಮನ್ನು ರಾಜ್ಯಸಭೆಗೆ ತನ್ನಿ ಎಂದು ಗುಲಾಂ ನಬಿ ಸೋನಿಯಾರಿಗೆ ಕೇಳಿಕೊಂಡಿದ್ದರು. ಆದರೆ ರಾಹುಲ್ ಮತ್ತು ಪ್ರಿಯಾಂಕಾ ಯಾವುದೇ ಕಾರಣಕ್ಕೂ ಬೇಡ ಎಂದು ಹಟ್ ಹಿಡಿದಾಗ ಸೋನಿಯಾ ಫೋನ್ ಮಾಡಿ ಆಜಾದ್‌ಜೀ, ನಿಮ್ಮ ಹೆಸರು ಮ್ಯಾನೇಜ್ ಮಾಡಲು ಆಗುತ್ತಿಲ್ಲ ಎಂದು ಹೇಳಿದ ದಿನವೇ ಗುಲಾಂ ನಬಿ ಸಿಟ್ಟಿನಲ್ಲಿದ್ದರು. ಆಜಾದ್ ಆಪ್ತರು ಹೇಳುವ ಪ್ರಕಾರ ಅಮರಿಂದರ್ ತರಹವೇ ಒಂದು ಮುಸ್ಲಿಂ ಪಾರ್ಟಿ ಮಾಡಿಕೊಂಡು ಬಿಜೆಪಿ ಜೊತೆಗೆ ಹೋದರೆ ಮರಳಿ 73ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆಗುವ ಉಮೇದಿಯಲ್ಲಿ ಗುಲಾಂ ನಬಿ ಇದ್ದಾರೆ.

ಹೊಸ ಪಕ್ಷ ಕಟ್ಟುತ್ತಾರಾ ಗುಲಾಂ ನಬಿ
ಬಿಜೆಪಿ ಮೂಲಗಳ ಪ್ರಕಾರ ಆಜಾದ್ ನೇರವಾಗಿ ಪ್ರಧಾನಿ ಮೋದಿ ಸಂಪರ್ಕದಲ್ಲಿಯೇ ಇದ್ದಾರೆ. ಯಾವಾಗ 5 ದಿನಗಳ ಹಿಂದೆ ವಿದೇಶಕ್ಕೆ ಹೋಗಬೇಕಾದಾಗ ಸೋನಿಯಾ ಗಾಂಧಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್‌ರನ್ನು ಕಾಂಗ್ರೆಸ್‌ಗೆ ಅಧ್ಯಕ್ಷರಾಗಿ ಎಂದು ಹೇಳಿ ಆಗಸ್ಟ್ 28ಕ್ಕೆ ಚುನಾವಣಾ ವೇಳಾಪಟ್ಟಿತಯಾರಿಸಲು ಕಾಂಗ್ರೆಸ್ ಕಾರ್ಯಕಾರಿ ಸಭೆ ಕರೆದರೋ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಬಿಡುವವರ ಇಷ್ಟದ 'ಹೊಡೆಯುವ ಚೀಲ' ರಾಹುಲ್ ಗಾಂಧಿಗೆ 'ಹೊಡೆದು' ಪಾರ್ಟಿ ಬಿಟ್ಟಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷ ತೊರೆದಿರುವ ನಬಿ ಬಿಜೆಪಿ ಸೇರುತ್ತಾರೆಂದು ಹೇಳಲಾಗುತ್ತಿದೆ. ಆದರೆ ಅವರು ಸ್ವತ: ತಾವು ಬಿಜೆಪಿ ಸೇರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಬಿ ಅವರು ಮುಂದೆ ಹೊಸ ಪಕ್ಷ ಕಟ್ಟುತ್ತಾರೋ ಅಥವಾ ಬಿಜೆಪಿ ಸೇರುವ ಮನಸ್ಸು ಮಾಡ್ತಾರೋ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications