ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ : ಆಯೋಗ ಮರುಚರ್ಚೆ
ಶ್ರೀನಗರ, ಮಾರ್ಚ್ 11 : ಲೋಕಸಭೆ ಚುನಾವಣೆಯೊಂದಿಗೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಿಂದೇಟು ಹಾಕಿರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪಕ್ಷಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ಅವರು ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರರ ದಾಳಿ ನಡೆಯುತ್ತಿರುವುದರಿಂದ ಮತ್ತು ತ್ವೇಷಮಯ ವಾತಾವರಣ ಇರುವುದರಿಂದ, ಅಲ್ಲಿ ಸದ್ಯಕ್ಕೆ ವಿಧಾನಸಭೆ ಚುನಾವಣೆ ನಡೆಸದಿರಲು ಆಯೋಗ ನಿರ್ಧರಿಸಿತ್ತು. ಭದ್ರತೆಯ ಸಮಸ್ಯೆ ತಲೆದೋರಬಹುದಾದ್ದರಿಂದ ಲೋಕಸಭೆ ಚುನಾವಣೆ ನಡೆಸಲು ಸಾಧ್ಯವಾದರೆ ವಿಧಾನಸಭೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 11, ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಮೂರು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಭಯೋತ್ಪಾದನೆಯಿಂದಲೇ ಜರ್ಝರಿತವಾಗಿರುವ ರಾಜ್ಯದಲ್ಲಿ ಅನಂತನಾಗ್, ಬಾರಾಮುಲ್ಲಾ, ಜಮ್ಮು, ಲಡಾಖ್, ಶ್ರೀನಗರ, ಉಧಮ್ ಪುರ ಎಂಬ 6 ಲೋಕಸಭಾ ಕ್ಷೇತ್ರಗಳಿವೆ.
ಫಾರೂಕ್ ಅಬ್ದುಲ್ಲಾ ಆರೋಪ : ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಜೈಷ್-ಎ-ಮೊಹಮ್ಮದ್ ಮೇಲೆ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿತ್ತು ಎಂದು ನ್ಯಾಷನಲ್ ಕಾನ್ಫರನ್ಸ್ ನಾಯಕ ಡಾ. ಫಾರೂಕ್ ಅಬ್ದುಲ್ಲಾ ಅವರು ಇತರ ವಿರೋಧಿಗಳ ಕೂಗಿಗೆ ಪ್ರತಿಧ್ವನಿಯಾಗಿದ್ದಾರೆ.
ಕೇವಲ ಚುನಾವಣೆಗಾಗಿಯೇ ಸರ್ಜಿಕಲ್ ಸ್ಟ್ರೈಕ್ (ಏರ್ ಸ್ಟ್ರೈಕ್) ಮಾಡಲಾಗಿದೆ. ನಾವೀಗ ಕೋಟಿಗಟ್ಟಲೆ ಬೆಲೆಬಾಳುವ ಏರ್ ಕ್ರಾಫ್ಟ್ ಅನ್ನು ಕಳೆದುಕೊಂಡಿದ್ದೇವೆ. ಅದೃಷ್ಟವಶಾತ್ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾರಾದರು ಮತ್ತು ಪಾಕಿಸ್ತಾನದಿಂದ ಗೌರವದಿಂದಲೇ ವಾಪಸ್ ಬಂದಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.












Click it and Unblock the Notifications