IPL 2024 Final: ದೇಶಿ v/s ವಿದೇಶಿ ಕ್ಯಾಪನ್ ನಡುವೆ ಕಪ್ ಗೆಲ್ಲೋದು ಯಾರು?
ಐಪಿಎಲ್ 2024 ರೋಚಕ ಘಟ್ಟ ತಲುಪಿದೆ. ಭಾನುವಾರ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಕೆಕೆಆರ್ ಹಾಗೂ ಎಸ್‌ಆರ್‌ಎಚ್ ತಂಡಗಳು ನಡುವೆ ಫೈನಲ್ ಫೈಟ್ ನಡೆಯಲಿದೆ. ಎರಡನೇ ಬಾರಿಗೆ ಪ್ರಶಸ್ತಿ ಎತ್ತಲು ಕೋಲ್ಕತ್ತಾ ಹಾಗೂ ಹೈದರಾಬಾದ್ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ.
ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕೆಕೆಆರ್, ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿರುವ ಎಸ್‌ಆರ್‌ಎಚ್ ತಂಡ ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲಿದೆ. ಉಭಯ ತಂಡಗಳು ಈಗಾಗಲೇ ತಲಾ ಒಂದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಮತ್ತೊಮ್ಮೆ ಚಾಂಪಿಯನ್ ಆಗುವ ಕನಸು ಕಾಣುತ್ತಿವೆ.

ದೇಶಿ v/s ವಿದೇಶಿ
ಈ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಈ ಕಾಳಗವನ್ನು ದೇಶಿ ಹಾಗೂ ವಿದೇಶಿ ನಾಯಕರ ನಡುವಿನ ಹೋರಾಟವನ್ನು ನೋಡಲು ಅಭಿಮಾನಿಗಳು ತಯಾರಾಗಿದ್ದಾರೆ.
ಸಂಘಟಿತ ಆಟವೇ ಬಲ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಂಘಟಿತ ಆಟದ ಮೇಲೆ ಬಲವನ್ನು ಇಟ್ಟುಕೊಂಡಿದೆ. ಈ ತಂಡದ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರೆತು ಆಡುತ್ತಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್‌ಗಳು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಲಿದ್ದಾರೆ. ರಹಮತುಲ್ಲಾ ಗುರಬಾಜ್ ಹಾಗೂ ಸ್ಫೋಟಕ ಬ್ಯಾಟರ್ ಸುನಿಲ್ ನರೈನ್ ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೊಮ್ಮೆ ಇದೇ ಪ್ರದರ್ಶನವನ್ನು ಮರುಕಳಿಸುವ ಅವಶ್ಯಕತೆ ಇದೆ.
ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲರು. ಡೆತ್ ಓವರ್‌ಗಳಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ಆಂಡ್ರಿ ರಸೆಲ್ ಮಾಡಲಿದ್ದಾರೆ.
ಮಹತ್ವದ ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸುವ ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ನಿಜಕ್ಕೂ ಎದುರಾಳಿ ಬ್ಯಾಟರ್‌ಗಳ ನಿದ್ದೇಗೆಡಿಸುವ ರಣ ತಂತ್ರವನ್ನು ಹೆಣೆದುಕೊಂಡಿದ್ದಾರೆ.

ಟಾಪ್ ಆರ್ಡರ್ ಬಲ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಟಾಪ್ ಆರ್ಡರ್ ಆಟಗಾರರು ಇಡೀ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ವಿದೇಶಿ ಆಟಗಾರ ಟ್ರಾವಿಸ್ ಹೆಡ್, ಅನ್‌ಕ್ಯಾಪ್ಡ್ ಪ್ಲೇಯರ್ ಅಭಿಷೇಕ್ ಶರ್ಮಾ ರನ್‌ವೇಗವನ್ನು ಸ್ಥಿರವಾಗಿ ಇಟ್ಟುಕೊಂಡು ಬ್ಯಾಟ್ ಮಾಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಐಡೇನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ ಸಹ ಎದುರಾಳಿ ತಂತ್ರವನ್ನು ಬುಡಮೇಲು ಮಾಡು ಕ್ಷಮತೆ ಹೊಂದಿದ್ದಾರೆ.
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ನಿತೀಶ್ ಕುಮಾರ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ನೆರವಾಗಬಲ್ಲರು. ಬೌಲಿಂಗ್ ವಿಭಾಗದ ನೊಗವನ್ನು ಸ್ವತಃ ಪ್ಯಾಟ್ ಕಮಿನ್ಸ್ ಹೊರಲಿದ್ದು, ಜಯಂತ್ ಯಾದವ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್ ನಾಯಕನಿಗೆ ಉತ್ತಮ ಸಾಥ್ ನೀಡಲಿದ್ದಾರೆ.
ವೀಕೆಂಡ್ ಮಜಾ ಹೆಚ್ಚಿಸಲಿರುವ ಐಪಿಎಲ್ ಫೈನಲ್‌ನಲ್ಲಿ ಯಾರು ಚಾಂಪಿಯನ್ ಆಗುತ್ತಾರೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.












Click it and Unblock the Notifications