Virat Kohli: ಅಭ್ಯಾಸ ಪಂದ್ಯಕ್ಕೆ ಮುನ್ನ ತುರ್ತಾಗಿ ಮುಂಬೈಗೆ ಮರಳಿದ ವಿರಾಟ್ ಕೊಹ್ಲಿ : ಕಾರಣವೇನು?
ಸೆಪ್ಟೆಂಬರ್ 30ರಂದು ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾದ ಬಳಿಕ ಭಾರತ ತಂಡ ಎರಡನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮುನ್ನವೇ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡವನ್ನು ತೊರೆದು ಮುಂಬೈಗೆ ಮರಳಿದ್ದಾರೆ.
'ವೈಯಕ್ತಿಕ ತುರ್ತು' ಕಾರಣ ನೀಡಿ ಗುವಾಹಟಿಯಿಂದ ಅವರು ಮುಂಬೈಗೆ ಪ್ರಯಾಣ ಮಾಡಿದ್ದು, ಭಾರತ ತಂಡದ ಉಳಿದ ಆಟಗಾರರು ತಿರುವನಂತಪುರಕ್ಕೆ ಆಗಮಿಸಿದ್ದಾರೆ. ವಿರಾಟ್ ಕೊಹ್ಲಿ ದಿಢೀರನೆ ಮುಂಬೈಗೆ ಮರಳಲು ಕಾರಣ ಏನು ಎಂದು ತಿಳಿದಿಲ್ಲವಾದರೂ, ಅವರು ನೆದರ್ಲ್ಯಾಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಖಚಿತಪಡಿಸಿಲ್ಲ.

ವಿರಾಟ್ ಕೊಹ್ಲಿ ತುರ್ತಾಗಿ ಮುಂಬೈಗೆ ಮರಳಲು ಕಾರಣವೇನು ಎಂದು ಬಹಿರಂಗಪಡಿಸಿಲ್ಲ. ಆದರೆ, ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದೇ ಕಾರಣಕ್ಕಾಗಿ ಅವರು ಕುಟುಂಬದ ಜೊತೆ ಕಾಲ ಕಳೆಯಲು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮೂಲವೊಂದು ಅವರು ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ತೆರಳಿದ್ದಾರೆ ಎಂದು ಖಚಿತಪಡಿಸಿದ್ದಾರೆ. ವಿರಾಟ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ, ಎಂದು ಬಿಸಿಸಿಐ ಮೂಲವು ಹೇಳಿರುವುದಾಗಿ ಕ್ರಿಕ್‌ಬಜ್ ವೆಬ್‌ಸೈಟ್ ವರದಿ ಮಾಡಿದೆ. ಭಾನುವಾರ ಸಂಜೆ ಭಾರತ ತಂಡದ ಆಟಗಾರರು ತಿರುವನಂತಪುರಕ್ಕೆ ಆಗಮಿಸಿದ್ದಾರೆ.
ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ?
ಭಾರತ ತಂಡದ ಮೊದಲ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮೊದಲನೇ ಅಭ್ಯಾಸ ಪಂದ್ಯ ಆಡಬೇಕಿತ್ತು, ಗುವಾಹಟಿಯಲ್ಲಿ ಹೆಚ್ಚಿನ ಮಳೆಯಾದ ಕಾರಣ ಒಂದು ಚೆಂಡು ಕೂಡ ಆಡದೆ ಪಂದ್ಯ ರದ್ದಾಯಿತು.
ಅಕ್ಟೋಬರ್ 3 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆಯು ಹಗಲಿನ ಮಳೆಯ ಸಾಧ್ಯತೆ 97% ಎಂದು ಮುನ್ಸೂಚಿಸುತ್ತದೆ. ಇದಲ್ಲದೆ, ರಾತ್ರಿಯ ಮಳೆಯ ಗಣನೀಯ 91% ಸಂಭವನೀಯತೆ ಇದೆ ಎಂದು ಹೇಳಿದೆ. ತಾಪಮಾನವು 25-30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನೆದರ್ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯದ ನಂತರ, ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಈ ಬಾರಿ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.












Click it and Unblock the Notifications