
ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಕ್ಕೆ ಬಹುಪರಾಕ್ ಎಂದ ಮೋದಿ
ನವದೆಹಲಿ, ಆಗಸ್ಟ್ 29: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2022ರ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ರೋಹಿತ್ ಶರ್ಮಾ ಪಡೆ ದಾಖಲಿಸಿದ ಗೆಲುವಿಗೆ ಭರಪೂರ ಹೊಗಳಿಕೆ, ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಏಷ್ಯಾಕಪ್ 2022ರಲ್ಲಿ ಗೆಲುವಿನ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿರುವ ಟೀಂ ಇಂಡಿಯಾದ ಆಲ್ ರೌಂಡ್ ಪ್ರದರ್ಶನವನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ಟ್ವೀಟ್ ಮಾಡಿ ತಂಡಕ್ಕೆ ತಮ್ಮ ಅಭಿನಂದನೆ ತಿಳಿಸಿದ್ದಾರೆ.
ಉಭಯ ತಂಡಗಳು ಪ್ರಮುಖ ಬೌಲರ್ಸ್ ಅನುಪಸ್ಥಿತಿ ನಡುವೆ ಆಲ್ ರೌಂಡರ್ ಗಳು ಮಿಂಚಿದ್ದು ವಿಶೇಷವಾಗಿತ್ತು. ರೋಚಕವಾಗಿ ನಡೆದ ಪಂದ್ಯದಲ್ಲಿ ಇನ್ನು ಎರಡು ಎಸೆತ ಬಾಕಿ ಇರುವಂತೆ ಟೀಂ ಇಂಡಿಯಾದ ಭರವಸೆಯ ಆಟಗಾರ ಹಾರ್ದಿಕ್ ಪಾಂಡ್ಯ ಗೆಲುವಿನ ಗುರಿ ಮುಟ್ಟಿಸಿದರು. ಪಾಕಿಸ್ತಾನ ನೀಡಿದ್ದ 148 ರನ್ ಗಳ ಗುರಿಯನ್ನು ಟೀಂ ಇಂಡಿಯಾ 19.4 ಓವರ್ ಗಳಲ್ಲಿ ದಾಟಿ ಗೆಲುವಿನ ನಗೆ ಬೀರಿತು.
ಅಂದ ಹಾಗೆ, ಆಗಸ್ಟ್ 27ರಂದು ಆಫ್ಘಾನಿಸ್ತಾನ-ಶ್ರೀಲಂಕಾ ಪಂದ್ಯದೊಂದಿಗೆ ಏಷ್ಯಾಕಪ್ 2022ರ ಪಂದ್ಯಾವಳಿಗೆ ಚಾಲನೆ ದೊರೆದಿತ್ತು, ಮೊದಲ ಪಂದ್ಯದಲ್ಲೇ ಶ್ರೀಲಂಕಾವನ್ನು ಅಫ್ಘಾನಿಸ್ತಾನ ಮಣಿಸಿ ಭರ್ಜರಿ ಆರಂಭ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಾಕಿಸ್ತಾನದ ಪ್ರಮುಖ ಬೌಲರ್ ಶಾಹಿನ್ ಅಫ್ರಿದಿ ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದರೆ, ಭಾರತದ ಜಸ್ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಭಾರತ ತಂಡದ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜ ಹಾಗೂ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಜೊತೆಯಾಟ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.
#TeamIndia put up a spectacular all-round performance in today’s #AsiaCup2022 match. The team has displayed superb skill and grit. Congratulations to them on the victory.
— Narendra Modi (@narendramodi) August 28, 2022
ಪ್ರಧಾನಿ ಕೂಡಾ ತಂಡದ ಗೆಲುವಿಗೆ ಸಂಘಟಿತ ಪ್ರದರ್ಶನ, ಉತ್ತಮ ಕೌಶಲ್ಯ ಕಾರಣ ಎಂದು ಹೊಗಳಿದ್ದಾರೆ. ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಹಾರ್ದಿಕ್ ನಂತರ ರನ್ ಚೇಸ್ ಮಾಡಲು ಕಣಕ್ಕಿಳಿದು, ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ, ತಂಡದ ಗೆಲುವಿಗೆ ಕಾರಣರಾದರು.
ರನ್ ಚೇಸ್ ಉತ್ತಮವಾಗಿರಲಿಲ್ಲ: ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೂ, ಇನ್ನಿಂಗ್ಸ್ ನ 2ನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು. ಚೊಚ್ಚಲ ಟಿ20 ಪಂದ್ಯವನ್ನು ಆಡಿದ ನಸೀಮ್ ಶಾಗೆ ಭರ್ಜರಿ ವಿಕೆಟ್ ಸಿಕ್ಕಿತ್ತು. ನಂತರ ಬಂದ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಕುರುಹು ತೋರಿದರು, ಇನ್ನೊಂದೆಡೆ ರೋಹಿತ್ ಶರ್ಮಾ ನಿಧಾನಗತಿಯಲ್ಲಿ ಆಡುತ್ತಿದ್ದರು. ಆದರೂ ಇಬ್ಬರಿಂದ 49 ರನ್‌ಗಳ ಜೊತೆಯಾಟ ಬಂದಿದ್ದು, ಭದ್ರ ಬುನಾದಿಯಾಯಿತು. ಪಾಕ್ ಬೌಲರ್ ನವಾಜ್ ಈ ಜೊತೆಯಾಟ ಬೇರ್ಪಡಿಸಿದ್ದಲ್ಲದೆ, ಇಬ್ಬರ ವಿಕೆಟ್ ಉರುಳಿಸಿ, ಭಾರತಕ್ಕೆ ಆಘಾಯ ನೀಡಿದರು. ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಪೆವಿಲಿಯನ್ ಸೇರುವ ಹೊತ್ತಿಗೆ ಪಂದ್ಯ ರೋಚಕ ಹಂತ ತಲುಪಿತ್ತು.

ಆದರೆ, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ಅರ್ಧ ಶತಕದ ಜೊತೆಯಾಟ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದರು. ಗೆಲುವಿನ ಹೊಸ್ತಿಲಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಜಡೇಜಾ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಗೆಲುವು ತಂದಿತ್ತರು.
2018ರ ಏಷ್ಯಾಕಪ್ ಪಂದ್ಯದಲ್ಲಿ ಗಾಯಾಳುವಾಗಿ ಮೈದಾನದಿಂದ ಸ್ಟ್ರೆಚರ್ ಮೂಲಕ ಹೊರಕ್ಕೆ ಹೋಗಿದ್ದ ಹಾರ್ದಿಕ್ ಪಾಂಡ್ಯ, ಇಂದಿನ ಪಂದ್ಯದಲ್ಲಿ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದಲ್ಲದೆ 3 ವಿಕೆಟ್ ಕಬಳಿಸಿ, ಭರ್ಜರಿಯಾಗಿ ತಮ್ಮ ಕಮ್ ಬ್ಯಾಕ್ ಘೋಷಿಸಿದರು. ಜೊತೆಗೆ ತಂಡದ ಗೆಲುವಿಗೆ ಕಾರಣದರು.