T20 World Cup: ಭಾರತ, ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಕಾಟ; ಏನು ಹೇಳುತ್ತೇ ಐಸಿಸಿ ನಿಯಮ?
ಇಂದು ಬಾರ್ಬಡೋಸ್ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಜೇಯ ಓಟವನ್ನು ಮುನ್ನಡೆಸಿದ್ದರಿಂದ, ಕುತೂಹಲ ಹೆಚ್ಚಿದೆ. ಯಾರು ಕಪ್‌ಗೆ ಮುತ್ತಿಡಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿರುವ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಲೀಗ್ ಹಂತದಿಂದ ಸೂಪರ್ 8 ಹಂತ ಹಾಗೂ ಉಪಾಂತ್ಯ ಪಂದ್ಯದಲ್ಲೂ ಒಂದೇ ಒಂದು ಸೋಲನ್ನು ಕಾಣದೇ ಫೈನಲ್‌ಗೆ ಪ್ರವೇಶವನ್ನು ಪಡೆದಿದೆ. ಇನ್ನು ದಕ್ಷಿಣ ಆಫ್ರಿಕಾ ಸಹ ಟೂರ್ನಿಯಲ್ಲಿ ಅಜೇಯ ಓಟವನ್ನು ನಡೆಸಿದೆ. ಹೀಗಾಗಿ ಯಾರ ಜಯದ ಓಟಕ್ಕೆ ಬ್ರೇಕ್ ಬೀಳುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ.

ಪ್ರಶಸ್ತಿಯ ಬರ ನೀಗಿಸಲು ಒಳ್ಳೆಯ ಅವಕಾಶ
ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್ ಪಟ್ಟವನ್ನು ಕಳಚಿಕೊಳ್ಳಲು ಇದು ಸುವರ್ಣ ಅವಕಾಶ ಆಗಿದೆ. ಇನ್ನು ಟೀಮ್ ಇಂಡಿಯಾಗೂ ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಲು ಇದು ಒಳ್ಳೆಯ ಅವಕಾಶ. ಹೀಗಾಗಿ ಉಭಯ ತಂಡಗಳ ನಡುವೆ ಬಿಗ್ ಫೈಟ್ ನೋಡಬಹುದಾಗಿದೆ. ಆದರೆ, ಈ ಫೈಟ್‌ಗೆ ಮಳೆ ಕಾಟ ನೀಡಬಹುದು ಎಂದು ತಿಳಿದು ಬಂದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೂ ಮಳೆ ಕಾಟ ನೀಡಿತ್ತು. ಈ ಪಂದ್ಯಕ್ಕೆ ಹೆಚ್ಚುವರಿ ಸಮಯಾವಕಾಶವನ್ನು ನೀಡಲಾಗಿತ್ತು. ಅಂತಿಮವಾಗಿ ಮಳೆ ಶಾಂತವಾಗಿದ್ದರಿಂದ ಪೂರ್ಣ ಓವರ್‌ಗಳ ಪಂದ್ಯ ನಡೆಯಿತು.
ಫೈನಲ್‌ಗೆ ಮಳೆ ಕಾಟ?
ಫೈನಲ್ ಪಂದ್ಯಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯ ನಡೆಯುವ ದಿನ ಶೇಕಡಾ 78 ಪ್ರತಿಷತದಷ್ಟು ಮಳೆ ಆಗುವುದಾಗಿ ತಿಳಿದು ಬಂದಿದೆ. ಇನ್ನು ರಾತ್ರಿ ಮೂರು ಗಂಟೆಯಿಂದ ಬೆಳಗ್ಗೆ 10 ಗಂಟೆಯ ವರೆಗೆ ಮಳೆ ಬಿಟ್ಟು ಬಿಟ್ಟು ಬರಲಿದ್ದು, 10 ರಿಂದ 12 ರವರೆಗೆ ಮಳೆಯ ಬಿರುಸಾಗಿ ಸುರಿಯಲಿದೆ. ಇನ್ನು ಮಧ್ಯಾಹ್ನದ ವರೆಗೂ ಪಂದ್ಯಕ್ಕೆ ಮಳೆ ಕಾಟ ನೀಡಬಹುದು.

ಫೈನಲ್ ಪಂದ್ಯಕ್ಕಿದೆ ರಿಸರ್ವ್ ಡೇ
ಒಂದು ವೇಳೆ ಜೂನ್ 29 ರಂದು ಮಳೆ ಬಂದು ಪಂದ್ಯ ನಡೆಯದೇ ಇದ್ದರೆ, ರಿಸರ್ವ್ ಡೇಗೆ ಪಂದ್ಯ ಶಿಫ್ಟ್ ಆಗಲಿದೆ. ಭಾನುವಾರ ರಿಸರ್ವ್ ಡೇ ಎಂದು ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಆರಂಭವಾಗಲಿದೆ. ಅಲ್ಲದೆ ಈ ದಿನವೂ ಮಳೆ ಸಾಧ್ಯತೆ ಶೇಕಡಾ 25 ಪ್ರತಿಷತ ಇದೆ. ಅಲ್ಲದೆ ಪಂದ್ಯಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಜೂನ್ 29ರಂದೇ ಫೈನಲ್ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾದರೆ, ರಾತ್ರಿ 11 ಗಂಟೆ 10 ನಿಮಿಷದ ವರೆಗೆ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಇಲ್ಲಿಯವರೆಗೂ ಓವರ್‌ಗಳಿಗೆ ಕತ್ತಿರ ಬೀಳುವುದಿಲ್ಲ. ಒಂದು ವೇಳೆ ಈ ಸಮಯವನ್ನು ಮೀರಿದ್ದೇ ಆದಲ್ಲಿ ಓವರ್‌ಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಇನ್ನು ಜೂನ್ 29 ಹಾಗೂ ಜೂನ್ 30 ರಂದು ಎರಡೂ ದಿನ ಆಟ ಆರಂಭವಾಗಲು ಮಳೆ ಬಿಡದೆ ಇದ್ದ ಪಕ್ಷದಲ್ಲಿ ಉಭಯ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುವುದು.












Click it and Unblock the Notifications