T20 World Cup: ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಲು ಸಜ್ಜಾದ ವಿಲ್ ಜ್ಯಾಕ್ಸ್
ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಲು ವಿಲ್ ಜ್ಯಾಕ್ಸ್ ಸಜ್ಜಾಗಿದ್ದಾರೆ. ಐಪಿಎಲ್ 2024ರ ಆವೃತ್ತಿಯಲ್ಲಿ ಆರ್ ಸಿಬಿ ಪರವಾಗಿ ಅಬ್ಬರಿಸುತ್ತಿರುವ ವಿಲ್ ಜ್ಯಾಕ್ಸ್ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಇಂದು ಟಿ20 ವಿಶ್ವಕಪ್‌ಗಾಗಿ ತಂಡವನ್ನು ಪ್ರಕಟಿಸಿದ್ದು, ಜೋಸ್ ಬಟ್ಲರ್ ನಾಯಕರಾಗಿದ್ದಾರೆ. 14 ತಿಂಗಳ ಸುದೀರ್ಘ ವಿಶ್ರಾಂತಿ ಬಳಿಕ ವೇಗದ ಬೌಲರ್ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದಾರೆ. ಮಾರ್ಚ್ 2023 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಆರ್ಚರ್ ಕೊನೆಯದಾಗಿ ಇಂಗ್ಲೆಂಡ್‌ಗಾಗಿ ಆಡಿದ್ದರು.

ಆರ್ಚರ್ ಬಲ ಮೊಣಕೈಯಲ್ಲಿ ಒತ್ತಡದ ಮುರಿತ ಕಾಣಿಸಿಕೊಂಡಿದ್ದರಿಂದ ಅವರು ಮೈದಾನಕ್ಕೆ ಮರಳು ಸಾಧ್ಯವಾಗಿರಲಿಲ್ಲ. ಜೋಫ್ರಾ ಆರ್ಚರ್ ತಮ್ಮ ಬಲ ಮೊಣಕೈ ಗಾಯದಿಂದ ಚೇತರಿಸಿಕೊಂಡಿದ್ದಾರೆ ಮತ್ತು ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಜೋಫ್ರಾ ಆರ್ಚರ್ ಸತತ ಅಭ್ಯಾಸ
2024ರ ಜನವರಿಯಿಂದ, ಆರ್ಚರ್ ಅವರು ಬಾರ್ಬಡೋಸ್‌ನಲ್ಲಿ ಬೆರಳೆಣಿಕೆಯ ಕ್ಲಬ್ ಪಂದ್ಯಗಳಲ್ಲಿ ಆಡುವುದರ ಜೊತೆಗೆ ಅಬುಧಾಬಿ ಮತ್ತು ಬೆಂಗಳೂರಿನಲ್ಲಿ ಸಸೆಕ್ಸ್‌ನ ಪೂರ್ವ-ಋತುವಿನ ಶಿಬಿರಗಳನ್ನು ಒಳಗೊಂಡಂತೆ ಕ್ರಿಕೆಟ್‌ಗೆ ಮರಳಲು ಅಭ್ಯಾಸ ಮಾಡುತ್ತಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಲಂಕಾಶೈರ್ ಆಲ್‌ರೌಂಡರ್ ಟಾಮ್ ಹಾರ್ಟ್ಲಿ ತಂಡದಲ್ಲಿರುವ ಏಕೈಕ ಅನ್‌ಕ್ಯಾಪ್ಡ್ ಆಟಗಾರನಾಗಿದ್ದಾರೆ.
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ಆಟಗಾರರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಎರಡು ಶತಕ ಬಾರಿಸಿರುವ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಆರ್ ಸಿಬಿ ತಂಡದಲ್ಲಿ ಆಡುತ್ತಿರುವ ವಿಲ್ ಜ್ಯಾಕ್ಸ್ ಮತ್ತು ವೇಗಿ ರೀಸ್ ಟೋಪ್ಲೆ ಇಬ್ಬರೂ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ವಿಲ್ ಜ್ಯಾಕ್ಸ್ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲೇ ಶತಕ ಬಾರಿಸಿ ಗಮನ ಸೆಳೆದಿದ್ದರು. ಸ್ಫೋಟಕ ಆರಂಭಿಕ ಆಟಗಾರನಾಗಿರುವ ಅವರು ಇಂಗ್ಲೆಂಡ್ ಪರವಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಜೂನ್ 4 ರಂದು ಬುಧವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ನ ಆರಂಭಿಕ ಗುಂಪು ಪಂದ್ಯವನ್ನಾಡಲಿದೆ. ಇಂಗ್ಲೆಂಡ್ ವಿಶ್ವಕಪ್ ತಂಡವು ಮೇ 31 ರಂದು ವೆಸ್ಟ್ ಇಂಡಿಸ್‌ಗೆ ಪ್ರಯಾಣ ಮಾಡಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.












Click it and Unblock the Notifications