ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೆನಡಾದ ಬಲ ಹೆಚ್ಚಿಸಲಿರುವ ಕರ್ನಾಟಕದ ಬೆಣ್ಣೆನಗರಿಯ ಆಲ್‌ರೌಂಡರ್
ದಾವಣಗೆರೆ, ಜೂನ್, 02: ಟಿ-20 ವಿಶ್ವಕಪ್ ಕ್ರಿಕೆಟ್ 2024 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಗೆಲುವಿಗೆ ರಣತಂತ್ರ ರೂಪಿಸಿವೆ. ಟೀಂ ಇಂಡಿಯಾ ಸಹ ಈ ಬಾರಿ ಗೆಲ್ಲುವ ಫೇವರಿಟ್ ತಂಡ. ವಿಶೇಷ ಅಂದರೆ, ಕರ್ನಾಟಕದ ಬೆಣ್ಣೆನಗರಿಯ ಯುವಕ ಕೆನಡಾ ತಂಡದ ಪರ ಆಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇವರ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟಿ-20 ವಿಶ್ವಕಪ್ ಕ್ರಿಕೆಟ್ 2024ಕ್ಕೆ ಬೆಣ್ಣೆನಗರಿ ದಾವಣಗೆರೆಯ ಶ್ರೇಯಸ್ ಮೋವಾ ಕೆನಡಾ ತಂಡಕ್ಕೆ ಆಯ್ಕೆ ಆಗಿದ್ದು, ಪೋಷಕರು, ಸ್ನೇಹಿತರು, ಕುಟುಂಬದವರು, ಸಂಬಂಧಿಕರಲ್ಲಿ ಸಂಭ್ರಮ ಮನೆ ಮಾಡಿದೆ.

ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಆಟಗಾರನಾಗಿದ್ದ ಶ್ರೇಯಸ್ ಮೋವಾ ಅವರು, ಟಿ-20 ವಿಶ್ವಕಪ್-2024ಕ್ಕೆ ಕೆನಾಡ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ರಿಕೆಟ್ ಅಕಾಡೆಮಿಯ ಕೋಚ್ ಗೋಪಾಲಕೃಷ್ಣ ಮಾಹಿತಿ ನೀಡಿದರು.
ಶ್ರೇಯಸ್ ಅವರು 2006ರಿಂದ 2016ರವರೆಗೆ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದರು. ನಗರದ ಬಿಐಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕೆಲಸ ಸಿಕ್ಕ ಕಾರಣಕ್ಕೆ ಕೆನಡಾಕ್ಕೆ ತೆರಳಿದ್ದರು. ನಂತರವೂ ತಮ್ಮ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದರು.
ಇದೀಗ ಕೆನಡಾ ತಂಡಕ್ಕೆ ಟಿ-20 ವಿಶ್ವಕಪ್‌ಗೆ ಆಡುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ನಾಗರಾಜ್ ಪಿ.ವಿ. ಎಂಬ ನುರಿತ ಕೆ.ಎಸ್.ಸಿ.ಎ. ಕೋಚ್ ಇವರ ಬಳಿ ತರಬೇತಿಯನ್ನು ಪಡೆದಿದ್ದರು.
ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತರಾಜ್ಯ ವಯೋಮಿತಿ ಒಳಗೊಂಡ 16 ವರ್ಷದೊಳಗಿನ, 19 ವರ್ಷದೊಳಗಿನ ಪಂದ್ಯಾವಳಿಗಳಿಗೆ ಆಯ್ಕೆಯಾಗುವ ಮೂಲಕ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
ತುಮಕೂರು ಕ್ರಿಕೆಟ್ ವಲಯದ ಸಂಚಾಲಕ ಕೆ.ಶಶಿಧರ್‌ರ ಅವರ ವೀನಸ್ ಕ್ರಿಕೆಟ್ ಕ್ಲಬ್ ತಂಡವನ್ನು ಸುಮಾರು ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ. ತದ ನಂತರದ ವರ್ಷಗಳಲ್ಲಿ ತಮ್ಮ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಲು ಕೆನಡಾ ದೇಶದ ಪೌರತ್ವವನ್ನು ಪಡೆದುಕೊಂಡು ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಿದ್ದಾರೆ.
ಹಲವು ವರ್ಷಗಳ ನಂತರ ಕೆನಡಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಜೂನ್-2024ರಿಂದ ಆರಂಭ ಆಗುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ.
ಶ್ರೇಯಸ್ ಮೋವಾ ಅವರ ಪೋಷಕರಾದ ಎಂ.ಜಿ.ವಾಸುದೇವರೆಡ್ಡಿ, ಎನ್.ಯಶೋಧ, ಕೋಚ್ ತಿಮ್ಮೇಶ್ ಸಂತಸ ವ್ಯಕ್ತಪಡಿಸಿದ್ದು, ಉತ್ತಮ ಪ್ರದರ್ಶನ ನೀಡಿ ಎಲ್ಲರ ಮನ ಗೆಲ್ಲಲಿ ಎಂದು ಹಾರೈಸಿದ್ದಾರೆ.












Click it and Unblock the Notifications